ಬೆಂಗಳೂರು: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಯೋಧರಿಗೆ ಬೆಂಬಲ ಸೂಚಿಸಿ ರಾಜ್ಯ ಕಾಂಗ್ರೆಸ್ ನಾಯಕರು ತಿರಂಗಾ ಯಾತ್ರೆ ನಡೆಸಿದರು.
ಬೆಂಗಳೂರಿನ ಕೆ.ಆರ್. ವೃತ್ತದಿಂದ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಬಳಿ ಇರುವ ಮಿನ್ಸ್ಕ್ ಸ್ಕ್ವೇರ್ ವರೆಗೆ ಹಮ್ಮಿಕೊಂಡ ತಿರಂಗಾ ಯಾತ್ರೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಭಾಗಿಯಾದರು. ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್, ಸಚಿವರಾದ ಹೆಚ್.ಕೆ.ಪಾಟೀಲ್, ಹೆಚ್.ಸಿ.ಮಹದೇವಪ್ಪ, ದಿನೇಶ್ ಗುಂಡೂರಾವ್, ಮಾಂಕಾಳ ವೈದ್ಯ ಸೇರಿದಂತೆ ಕಾಂಗ್ರೆಸ್ ಶಾಸಕರು, ಮುಖಂಡರು ಪಾಲ್ಗೊಂಡರು.
ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಭಾರತ್ ಮಾತಾ ಕಿ ಜೈ, ವಂದೇ ಮಾತರಂ, ಯೋಧರಿಗೆ ಜೈಕಾರ ಹಾಕುವ ಮೂಲಕ ಭಾರತೀಯ ಯೋಧರಿಗೆ ಬೆಂಬಲ ಸೂಚಿಸಿದರು.
ತಿರಂಗಾ ಯಾತ್ರೆಯಿಂದ ಟ್ರಾಫಿಕ್ ಜಾಮ್: ತಿರಂಗಾ ಯಾತ್ರೆಯಿಂದಾಗಿ ಕೆ.ಆರ್ ವೃತ್ತ, ವಿಧಾನಸೌಧ ರಸ್ತೆ, ಮೆಜೆಸ್ಟಿಕ್, ಆನಂದರಾವ್ ಸರ್ಕಲ್, ಕ್ವೀನ್ಸ್ ರೋಡ್, ನೃಪತುಂಗಾ ರೆಸ್ತೆ, ರಾಜಭವನ ರಸ್ತೆ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಭಾರಿ ಸಂಚಾರ ದಟ್ಟಣೆ ನಿರ್ಮಾಣವಾಯಿತು. ಈ ವೇಳೆ ವಾಹನ ಸವಾರರು ಪರದಾಡುವಂತಾಯಿತು. ಕಚೇರಿಗೆ ಹೋಗುವ ಸಮಯವಾಗಿದ್ದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಗಂಟೆಗಟ್ಟಲೇ ಬಿಸಿಲಿಗೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ ಹಲವು ವಾಹನ ಸವಾರರು ಸಂಚಾರ ನಿರ್ವಹಣೆ ಸೂಕ್ತವಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.




