ಆಪರೇಷನ್ ಸಿಂಧೂರ’ ಪ್ರಸ್ತುತ ಭಾರತದಲ್ಲಿ ಸಖತ್ ಸದ್ದು ಮಾಡುತ್ತಿರುವ ಹೆಸರು. ಭಯೋತ್ಪಾದಕ ಗುಂಪುಗಳ ವಿರುದ್ಧ ಭಾರತದ ಶಸಸ್ತ್ರ ಪಡೆಗಳು ಕೈಗೊಂಡಿರುವ ಕಾರ್ಯಾಚರಣೆ ಯಶಸ್ವಿಯಾಗಿ ಮುಂದುವರಿಯುತ್ತಿದೆ. ಈ ಶಕ್ತಿಶಾಲಿ ಶೀರ್ಷಿಕೆಯಡಿ ಸಿನಿಮಾವೊಂದು ಮೂಡಿ ಬರಲಿದೆ. ಬಾಲಿವುಡ್ ಚಲನಚಿತ್ರ ನಿರ್ಮಾಣ ಸಂಸ್ಥೆ ನಿಕ್ಕಿ ವಿಕ್ಕಿ ಭಗ್ನಾನಿ ಫಿಲ್ಮ್ಸ್ ಈ ‘ಆಪರೇಷನ್ ಸಿಂಧೂರ’ ಶೀರ್ಷಿಕೆಯನ್ನು ತನ್ನದಾಗಿಸಿಕೊಂಡಿದೆ. ಸಿನಿಮಾದ ಶೀರ್ಷಿಕೆ ಅಧಿಕೃತವಾಗಿ ಘೋಷಣೆಯಾಗಿದ್ದು, ಫಸ್ಟ್ ಲುಕ್ ಪೋಸ್ಟರ್ ಸಹ ಅನಾವರಣಗೊಳಿಸಲಾಗಿದೆ.
‘ಆಪರೇಷನ್ ಸಿಂಧೂರ’ ಪೋಸ್ಟರ್‌ನಲ್ಲಿ, ಸೇನಾ ಸಮವಸ್ತ್ರ ಧರಿಸಿದ ಮಹಿಳೆಯೊಬ್ಬರು ಹಣೆಗೆ ಸಿಂಧೂರ ಹಚ್ಚಿಕೊಳ್ಳುತ್ತಿರುವುದನ್ನು ತೋರಿಸಲಾಗಿದೆ. ಕೈಯಲ್ಲಿ ರೈಫಲ್, ಹಿನ್ನೆಲೆಯಲ್ಲಿ ಫೈಟರ್ ಜೆಟ್ ಮತ್ತು ಉರಿಯುತ್ತಿರುವ ಯುದ್ಧಭೂಮಿಯೊಂದಿಗೆ ಪೋಸ್ಟರ್ ಸಖತ್ ಪವರ್ಫುಲ್ ಆಗಿ ಚಿತ್ರೀಕರಿಸಲಾಗಿದೆ. ಕಾಶ್ಮೀರದ ಪಹಲ್ಗಾಮ್ ಮೇಲಿನ ಭಯೋತ್ಪಾದಕ ದಾಳಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗಲಿದೆ ಎಂದು ತಿಳಿದು ಬಂದಿದೆ. ಈ ಚಿತ್ರಕ್ಕೆ ಉತ್ತಮ್ ಮತ್ತು ನಿತಿನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಆದರೆ, ಈ ಚಿತ್ರದಲ್ಲಿ ನಟಿಸಲಿರುವ ಕಲಾವಿದರ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ. ಪಾತ್ರವರ್ಗ ಮತ್ತು ತಾಂತ್ರಿಕ ತಂಡದ ಹೆಸರುಗಳು ಶೀಘ್ರದಲ್ಲೇ ಪ್ರಕಟವಾಗುವ ಸಾಧ್ಯತೆ ಇದೆ.
ಭಾರತ ಸರ್ಕಾರ ಈ ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಕಾರ್ಯಾಚರಣೆ ಕೈಗೆತ್ತಿಕೊಂಡಾಗಿನಿಂದ, ಪ್ರಮುಖ ಬಾಲಿವುಡ್ ನಿರ್ಮಾಣ ಕಂಪನಿಗಳು ಈ ಶೀರ್ಷಿಕೆಯ ಹಕ್ಕುಗಳಿಗಾಗಿ ಸ್ಪರ್ಧಿಸಿವೆ. ಜೀ ಸ್ಟುಡಿಯೋಸ್ ಮತ್ತು ಟಿ – ಸೀರೀಸ್‌ನಂತಹ ಪ್ರಮುಖ ಬ್ಯಾನರ್‌ಗಳು ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘಕ್ಕೂ ಅರ್ಜಿ ಸಲ್ಲಿಸಿವೆ. ಅಂತಿಮವಾಗಿ, ಶೀರ್ಷಿಕೆ ಹಕ್ಕುಗಳನ್ನು ನಿಕ್ಕಿ ವಿಕ್ಕಿ ಭಗ್ನಾನಿ ಫಿಲ್ಮ್ಸ್ ಪಡೆದುಕೊಂಡಿದೆ.
ಪ್ರೇಕ್ಷಕರು ಮಿಲಿಟರಿ ಕಾರ್ಯಾಚರಣೆಗಳನ್ನು ಆಧರಿಸಿದ ಚಿತ್ರಗಳನ್ನು ಇಷ್ಟಪಡುತ್ತಾರೆ. ಈಗಾಗಲೇ ಬಂದಿರುವ ‘ಬಾರ್ಡರ್’, ‘ಉರಿ’, ‘ರಾಝಿ’, ‘ಫೈಟರ್’ ಮತ್ತು ‘ಅಮರನ್’ನಂತಹ ಸಿನಿಮಾಗಳು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಬಹುಶಃ ಇದೇ ಕಾರಣಕ್ಕೆ ಬಾಲಿವುಡ್ ನಿರ್ಮಾಪಕರು ‘ಆಪರೇಷನ್ ಸಿಂಧೂರ್’ ಶೀರ್ಷಿಕೆಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ.
ಶೀರ್ಷಿಕೆಗಾಗಿ ಕನ್ನಡ ಚಿತ್ರರಂಗದಲ್ಲಿ ಪೈಪೋಟಿ ಇರುವ ಬಗ್ಗೆ ಮಾತನಾಡಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ”ಆಪರೇಷನ್ ಸಿಂಧೂರ ಶೀರ್ಷಿಕೆಗಾಗಿ ಅರ್ಜಿಗಳು ಬಂದಿವೆ. 20ಕ್ಕೂ ಹೆಚ್ಚು ನಿರ್ಮಾಪಕರು ಈ ಟೈಟಲ್ಗಾಗಿ ಅಪ್ಲಿಕೇಶನ್ ಹಾಕಿದ್ದಾರೆ. ಯಾರಿಗೆ ಕೊಡೋದು ಅನ್ನೋದೀಗ ಪ್ರಶ್ನೆ. ಟೈಟಲ್ ಕಮಿಟಿಯಲ್ಲಿ ಒಂದು ಮೀಟಿಂಗ್ ನಡೆಸಿ ಸೂಕ್ತವಾಗಿರೋರಿಗೆ ಈ ಶೀರ್ಷಿಕೆ ನೀಡಲಾಗುವುದು” ಎಂದು ತಿಳಿಸಿದ್ದರು.




