ತುರುವೇಕೆರೆ: ಪಟ್ಟಣದ ಸಿಡಿಯೋರ ಬೀದಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಯುವಕನೋರ್ವನ ಶವ ನೇಣುಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವನಲ್ಲ, ಇದೊಂದು ಪೂರ್ವನಿಯೋಜಿತ ಕೊಲೆಯಾಗಿದೆ ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಬಹಳ ವರ್ಷಗಳಿಂದ ವಾಸವಾಗಿದ್ದು ಪೈಂಟಿಂಗ್ ವೃತ್ತಿ ಮಾಡುತ್ತಿದ್ದ ರಾಜೇಶ್(37) ಎಂಬಾತನೇ ಮರಣಹೊಂದಿರುವ ವ್ಯಕ್ತಿಯಾಗಿದ್ದಾನೆ. ರಾಜೇಶ್ನ ಶವ ಆತ ವಾಸಮಾಡುತ್ತಿದ್ದ ಬಾಡಿಗೆ ಮನೆಯಲ್ಲಿ ನೇಣುಹಾಕಿಕೊಂಡಿರುವ ಸ್ಥಿತಿಯಲ್ಲಿ ಗೋಚರಿಸಿದೆ. ಶವ ನೇಣುಹಾಕಿಕೊಂಡಿರುವ ಸ್ಥಿತಿಯಲ್ಲಿ ಕಂಡುಬಂದರೂ ವ್ಯಕ್ತಿಯ ಕಾಲು ನೆಲದ ಮೇಲೆ ಇರುವುದು, ಶವಕ್ಕೆ ಕಟ್ಟಿದ್ದ ಉದ್ದದ ಪ್ಲಾಸ್ಟಿಕ್ ಹಗ್ಗ ನೇತಾಡುತ್ತಿರುವುದು, ಆತನ ದೇಹದ ಹಲವೆಡೆ ಹಲ್ಲೆ ನಡೆಸಿರುವ ಗುರುತುಗಳು ಕಂಡುಬಂದಿರುವುದಲ್ಲದೆ, ರಾಜೇಶನ ಮನೆಯ ಬಾಗಿಲು ಸಹ ತೆರೆದೇ ಇರುವುದು ಆತ ಕೊಲೆಯಾಗಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಆತನ ಸಂಬಂಧಿಕರು ಕೊಲೆಯ ಅನುಮಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ರಾಜೇಶ್ ಕುಟುಂಬದವರು ಆಸ್ತಿಯನ್ನು ಮಾರಾಟ ಮಾಡಿದ್ದು, ಅದರಲ್ಲಿ ರಾಜೇಶನಿಗೂ ಸುಮಾರು 6-8 ಲಕ್ಷರೂಗಳನ್ನು ನೀಡಲಾಗಿತ್ತು. ಈ ಹಣವನ್ನು ಲಪಟಾಯಿಸಲು ಯಾರೋ ರಾಜೇಶನನ್ನು ಕೊಲೆ ಮಾಡಿರಬಹುದು ಎಂದು ಕುಟುಂಬದ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ. ತುರುವೇಕೆರೆ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಪ್ರಾರಂಭಿಕವಾಗಿ ಹಲವರ ವಿಚಾರಣೆಯನ್ನೂ ನಡೆಸಿದ್ದಾರೆ. ಕೆಲವರ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದು ತನಿಖೆ ಚುರುಕುಗೊಳಿಸಿದ್ದಾರೆ. ಪೊಲೀಸರು ನ್ಯಾಯಯುತವಾಗಿ ತನಿಖೆ ನಡೆಸಿ ತಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕೆಂದು ರಾಜೇಶ್ ಕುಟುಂಬಸ್ಥರು ಒತ್ತಾಯಿಸಿದ್ದಾರೆ.




