ವರ್ಷದಿಂದ ವರ್ಷಕ್ಕೆ ಕಾರುಗಳ ಮಾರಾಟ ಏರುತ್ತಲೇ ಇದೆ. ಇತ್ತೀಚಿನ ವರದಿಗಳ ಪ್ರಕಾರ, ಭಾರತೀಯರು ಕಾರಿನ ಮೇಲೆ ಹೆಚ್ಚು ಒಲವು ತೋರುತ್ತಿದ್ದಾರೆ. ಕೈಗಾರಿಕಾ ಸಂಸ್ಥೆ SIAM (ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರ್) ಬಿಡುಗಡೆ ಮಾಡಿದ ವರದಿಯಂತೆ, ಭಾರತದಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಏಪ್ರಿಲ್ 2025ರಲ್ಲಿ ಶೇ.4ರಷ್ಟು ಬೆಳವಣಿಗೆ ದಾಖಲಿಸಿದೆ. ಈ ಅವಧಿಯಲ್ಲಿ ಒಟ್ಟು 3,48,847 ಪ್ರಯಾಣಿಕ ವಾಹನಗಳನ್ನು ಡೀಲರ್ಗಳಿಗೆ ರವಾನಿಸಲಾಗಿದ್ದು, ಇದು ಏಪ್ರಿಲ್, 2024ಕ್ಕಿಂತ (3,35,629) ಹೆಚ್ಚಾಗಿದೆ.

ಏಪ್ರಿಲ್ನಲ್ಲಿ ಭಾರತದಿಂದ ರಫ್ತಾಗುತ್ತಿರುವ ಕಾರುಗಳ ಸಂಖ್ಯೆ ಕಳೆದ ವರ್ಷದ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಶೇ.20ರಷ್ಟು ಹೆಚ್ಚಾಗಿದೆ. ಈ ಬಾರಿ ಏಪ್ರಿಲ್ನಲ್ಲಿ 59,395 ವಾಹನಗಳು ಭಾರತದಿಂದ ರಫ್ತಾಗಿವೆ. ಇದೇ ವೇಳೆ, ದ್ವಿಚಕ್ರ ವಾಹನಗಳ ರಫ್ತಿನಲ್ಲಿ ಈ ವರ್ಷ ಕೇವಲ ಶೇ.14.7ರಷ್ಟು ಏರಿಕೆಯಾಗಿದ್ದು, 3,68,201 ಬೈಕ್ಗಳನ್ನು ಮಾತ್ರ ಭಾರತದಿಂದ ರಫ್ತು ಮಾಡಲಾಗಿದೆ ಎಂದು SIAM ಡಾಟಾದಿಂದ ತಿಳಿದುಬಂದಿದೆ.
ಅತ್ಯಧಿಕ ಮಾರಾಟ: ‘ಪ್ರಯಾಣಿಕ ವಾಹನ ವಿಭಾಗವು ಏಪ್ರಿಲ್ 2025ರಲ್ಲಿ 3.49 ಲಕ್ಷ ಯುನಿಟ್ಗಳ ಮಾರಾಟದೊಂದಿಗೆ ಏಪ್ರಿಲ್ನಲ್ಲಿ ಇದುವರೆಗಿನ ಅತ್ಯಧಿಕ ಸಗಟು ಮಾರಾಟವನ್ನು ದಾಖಲಿಸಿದೆ’ ಎಂದು SIAM ಮಹಾನಿರ್ದೇಶಕ ರಾಜೇಶ್ ಮೆನನ್ ಹೇಳಿದರು.
ಭಾರಿ ಕುಸಿತ: ಮತ್ತೊಂದೆಡೆ, ದ್ವಿಚಕ್ರ ವಾಹನಗಳ ಸಗಟು ಮಾರಾಟವು ವರ್ಷದಿಂದ ವರ್ಷಕ್ಕೆ ಶೇ.16.7ರಷ್ಟು ಭಾರಿ ಕುಸಿತ ಕಂಡಿದೆ. ಏಪ್ರಿಲ್ 2025ರಲ್ಲಿ ಕೇವಲ 14,58,784 ಯುನಿಟ್ಗಳನ್ನು ಡೀಲರ್ಗಳಿಗೆ ರವಾನಿಸಲಾಗಿದೆ. ಆದರೆ ಏಪ್ರಿಲ್ 2024ರಲ್ಲಿ ಈ ಸಂಖ್ಯೆ 17,51,393 ಆಗಿತ್ತು.
‘ಕಳೆದ ವರ್ಷ ಏಪ್ರಿಲ್ನಲ್ಲಿ ಮಾರಾಟವಾದ 17,51,393 ಯೂನಿಟ್ಗಳಿಗೆ ಹೋಲಿಸಿದರೆ,ದ್ವಿಚಕ್ರ ವಾಹನ ವಿಭಾಗವು ಬೆಳವಣಿಗೆಯಲ್ಲಿ ಕುಸಿತ ಕಂಡಿದೆ. ಆದರೆ, ಮುಂಬರುವ ತಿಂಗಳುಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆಯಿದೆ’ ಎಂದು SIAM ಮಹಾನಿರ್ದೇಶಕರು ಹೇಳಿದ್ದಾರೆ.




