ತುರುವೇಕೆರೆ: ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಹಾಗು ಕಲಿಕಾ ಸ್ನೇಹಿ ವಾತಾವರಣ ಇರುವ ಸರ್ಕಾರಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ತಿಳಿಸಿದರು.
ತಾಲ್ಲೂಕಿನ ದಂಡಿನಶಿವರ ಗ್ರಾಮದ ಕೆಪಿಎಸ್ಸಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಶಾಲಾ ಶಿಕ್ಷಣ ಇಲಾಖೆ ಹಾಗು ತಾಲ್ಲೂಕು ಅಕ್ಷರ ದಾಸೋಹ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುತ್ತಿರವುದರಿಂದ ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ರೀತಿಯ ಫಲಿತಾಂಶ ಬರುತ್ತಿದೆ. ಅಲ್ಲದೆ ಕೆಲ ಶಾಲೆಗಳಲ್ಲಿ ಶೇಕಡ ನೂರಷ್ಟು ಫಲಿತಾಂಶ ಬಂದಿರುವುದು ಸರ್ಕಾರಿ ಶಾಲೆಗಳ ಘನತೆಯನ್ನು ಹೆಚ್ಚಿಸಿದೆ. ಸರ್ಕಾರಿ ಶಾಲೆಗೆ ಸೇರುವ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕದಿಂದ ಹಿಡಿದು ಸ್ಕಾಲರ್ ಶಿಫ್ ತನಕವೂ ಹಲವು ಹಂತದಲ್ಲಿ ಸವಲತ್ತುಗಳನ್ನು ಸರ್ಕಾರ ನೀಡುತ್ತಿದೆ ಎಂದರು.
ಗ್ರಾಮೀಣ ಪ್ರದೇಶದ ಮಕ್ಕಳಂತೂ ಓದು, ಬರಹ ಮತ್ತು ಕ್ರೀಡೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇನ್ನೂ ಕೆಲವರು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆಯನ್ನು ಮಾಡಿದ್ದಾರೆ. ಹಾಗಾಗಿ ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಸೇರಿಸಿ ಕನ್ನಡ ಮಾಧ್ಯಮ ಶಾಲೆ ಉಳಿಸಿ ಬೆಳೆಸಲು ಎಲ್ಲರೂ ಶ್ರಮಿಸೋಣ ಎಂದರು.
ಅಕ್ಷರ ದಾಸೋಹ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕಿ ಸವಿತಾ ಎಚ್.ಕೆ ಮಾತನಾಡಿ, ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ಮೊಟ್ಟೆ, ಹಾಲು, ಬಾಳೆಹಣ್ಣು, ರಾಗಿ ಮಾಲ್ಟ್, ಮಧ್ಯಾಹ್ನದ ಬಿಸಿಯೂಟ, ಪೌಷ್ಠಿಕಾಂಶಯುಕ್ತ ಮಾತ್ರೆಗಳನ್ನು ಸರ್ಕಾರ ನೀಡುತ್ತಾ ಮಕ್ಕಳನ್ನು ಕಲಿಕೆಗೆ ಬೇಕಾದ ದೈಹಿಕ ಹಾಗು ಮಾನಸಿಕವಾಗಿ ಸಿದ್ದರಾಗುವಂತೆ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಸಿಆರ್ಪಿಗಳಾದ ಸುರೇಶ್, ಕಲಾ, ರಮೇಶ್, ತಾಲ್ಲೂಕಿನ ಎಲ್ಲ ಸಿ.ಆರ್.ಪಿಗಳು, ಪೋಷಕರು ಮತ್ತು ಎಸ್ ಡಿ ಎಂ ಸಿ ಸದಸ್ಯರು ಪಾಲ್ಗೊಂಡಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




