ಕೊಪ್ಪಳ : ಇಲ್ಲೊಬ್ಬ ಯುವಕ ವಿವಾಹಿತಳನ್ನು ಪ್ರೀತಿಸಿ ಮದುವೆಯಾಗಿದ್ದಾನೆ ಎಂಬ ಒಂದೇ ಒಂದು ಕಾರಣಕ್ಕಾಗಿ ಕಳೆದ 8 ವರ್ಷಗಳಿಂದ ಕುಟುಂಬವೊಂದನ್ನು ಅದೇ ಸಮಾಜದವರು ಬಹಿಷ್ಕರಿಸಿರುವ ಅಮಾನವೀಯ ಘಟನೆ ಕೊಪ್ಪಳದಲ್ಲಿ ನಡೆದಿದೆ.ಚಿಲಕಮುಕ್ಕಿ ಗ್ರಾಮದ ಹನುಮಂತಪ್ಪ, ಮಂಜುಳಾ ಹುಳ್ಳಿ ದಂಪತಿ ಹಾಗೂ ಇವರ ತಂದೆ-ತಾಯಿಯನ್ನು ಬಹಿಷ್ಕಾರ ಹಾಕಲಾಗಿದೆ.
ಕಳೆದ 8 ವರ್ಷದಿಂದ ಊರೂರು ಅಲೆದಿದ್ದ ಈ ಕುಟುಂಬ ಇದೀಗ ಗ್ರಾಮದ ಹೊರವಲಯದಲ್ಲಿ ಶೆಡ್ ಹಾಕಿಕೊಂಡು ವಾಸಿಸುತ್ತಿದ್ದಾರೆ.
ಶಿವಾಜಿ ಹಾಗೂ ಗಂಗಮ್ಮಳ ಮಗ ಹನುಮಂತಪ್ಪ ತಮ್ಮೂರಿನಲ್ಲಿಯೇ ಯುವತಿಯನ್ನು ಪ್ರೀತಿಸುತ್ತಿದ್ದ. ಆ ಪ್ರೀತಿಗೆ ಹುಡುಗಿ ಮನೆಯವರು ಒಪ್ಪದೇ ಬೇರೊಬ್ಬನ ಜೊತೆ ಮದುವೆ ಮಾಡಿದ್ದರು.
ಆದರೆ, ಮದುವೆಯಾಗಿದ್ದರೂ ಆ ಹುಡುಗಿ ಹನುಮಂತಪ್ಪನ ಜೊತೆ ಓಡಿಹೋಗಿದ್ದಳು.ಈ ವಿಷಯ ತಿಳಿಯುತ್ತಿದ್ದಂತೆ ಹುಳ್ಳಿ ಕುಟುಂಬಕ್ಕೆ ಪರ್ವತಮಲ್ಲಯ್ಯ ಸಮಾಜ 8 ವರ್ಷದ ಹಿಂದೆ ಬಹಿಷ್ಕಾರ ಹಾಕಿದೆ.
ಕೆಲ ದಿನಗಳ ಹಿಂದೆ ರಾಜಿ ಪಂಚಾಯಿತಿ ನಡೆದು ಹನುಮಂತಪ್ಪ ಮನೆಗೆ ಬೇಕಾದವರು ಹೋಗಬಹುದು ಎಂದು ಊರಿನವರು ತೀರ್ಮಾನಿಸಿದ್ದಾರೆ. ಆದ್ದರಿಂದ ಹುಳ್ಳಿ ಕುಟುಂಬದಲ್ಲಿ ಮಾಡಿದ ದೇವರ ಕಾರ್ಯಕ್ಕೆ ನಾಲ್ಕಾರು ಕುಟುಂಬ ಹೋಗಿ ಊಟ ಮಾಡಿ ಬಂದಿದ್ದರು.
ಈಗ ಈ ನಾಲ್ಕಾರು ಕುಟುಂಬ ಸೇರಿದಂತೆ ಹುಳ್ಳಿ ಮನೆಯಲ್ಲಿ ಯಾರ್ಯಾರು ಊಟ ಮಾಡಿದ್ದಾರೋ ಅವರೆಲ್ಲರನ್ನೂ ಬಹಿಷ್ಕರಿಸಲಾಗಿದೆ.ಇದೀಗ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಶಂಕ್ರಪ್ಪ ಬೋಗಿಗೂ ಬಹಿಷ್ಕಾರದ ಬಿಸಿ ತಟ್ಟಿದೆ.
ಹನುಮಂತಪ್ಪನ ತಂದೆ ಶಿವಾಜಿ, ತಾಯಿ ಗಂಗಮ್ಮ ಕಣ್ಣೀರು ಹಾಕುತ್ತಿದ್ದಾರೆ.ನಮ್ಮ ಜನಾಂಗದಲ್ಲಿ ನಮ್ಮನ್ನು ಸೇರಿಸಿ ಪುಣ್ಯಕಟ್ಟಿಕೊಳ್ಳಿ ಎಂದು ಬೇಡಿಕೊಳ್ಳುತ್ತಿದ್ದಾರೆ. ನಮ್ಮ ಮನೆಯಲ್ಲಿ ಸತ್ತರೂ, ಹಬ್ಬ ಮಾಡಿದರೂ, ಕಾರ್ಯ ಮಾಡಿದರೂ ಯಾರು ಬರುವಂತಿಲ್ಲ.
ನಾವು ಸಹ ಬೇರೆಯವರ ಮನೆಗೆ ಹೋಗುವಂತಿಲ್ಲ. ಇದು ನಮ್ಮದೇ ಹಿರಿಯರು ಹಾಕಿರುವ ಕಟ್ಟಪ್ಪಣೆ. ನಾವು ದಂಡ ಕಟ್ಟಿ ನಮ್ಮ ಜನರ ಜೊತೆ ಸೇರಲು ಸಿದ್ಧರಿದ್ದೇವೆ. ಆದಕ್ಕೂ ಅವಕಾಶ ನೀಡದೆ ನಮ್ಮನ್ನು ದೂರವಿಟ್ಟಿದ್ದಾರೆ ಎಂದು ಹನುಮಂತಪ್ಪ ತಾಯಿ ಗಂಗಮ್ಮ ಕಣ್ಣೀರಿಟ್ಟಿದ್ದಾರೆ.




