ನವದೆಹಲಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬೆಳೆಯುತ್ತಿರುವಂತೆಯೇ ಬ್ಯುಸಿನೆಸ್ ಸಂಸ್ಥೆಗಳು ವೆಚ್ಚ ಉಳಿಸಲು ಎಐ ಬಳಕೆ ಹೆಚ್ಚಿಸುತ್ತಿವೆ. ಕೆಲ ಕಂಪನಿಗಳು ಅವಶ್ಯಕತೆಗಿಂತ ಹೆಚ್ಚಾಗಿಯೇ ಎಐ ಆಶ್ರಯಿಸುತ್ತಿವೆ. ಸ್ವೀಡನ್ನ ಕಂಪನಿಯೊಂದು ತನ್ನ ಒಂದು ವಿಭಾಗಕ್ಕೆ ಮನುಷ್ಯರೇ ಬೇಡ, ಯಂತ್ರದ ಕೈಯಲ್ಲೇ ಎಲ್ಲಾ ಮಾಡಿಸ್ತೀನಿ ಎಂದು ಹೇಳಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಿತು. ಆದರೆ, ಇದೀಗ ಆ ನಿರ್ಧಾರವು ಕಂಪನಿಗೆ ತಿರುಗುಬಾಣ ನೀಡಿದೆ. ಅಯ್ಯೋ ಬೇಡಪ್ಪ ಯಾಂತ್ರಿಕ ಸೇವೆ, ಮನುಷ್ಯರೇ ಸರಿ ಎಂದು ಹೇಳುತ್ತಿದೆ. ಇದು ಸ್ವೀಡನ್ನ ಕ್ಲಾರ್ನಾ ಗ್ರೂಪ್ನ ಕಥೆ.
ಕ್ಲಾರ್ನಾ ಒಂದು ಫಿನ್ಟೆಕ್ ಕಂಪನಿ. ಪೇಮೆಂಟ್ ಸೇವೆ ನೀಡುತ್ತದೆ. ತನ್ನ ಕಸ್ಟಮರ್ ಸಪೋರ್ಟ್ ವಿಭಾಗಕ್ಕೆ ಎಐ ಅನ್ನು ಪೂರ್ಣವಾಗಿ ಬಳಸಲು ನಿರ್ಧರಿಸಿತು. ಉದ್ಯೋಗಿಗಳಿಗೆ ಆಗುವ ಸಂಬಳದ ವೆಚ್ಚವನ್ನು ಉಳಿಸಲು ಕ್ಲಾರ್ನಾ ಈ ನಿರ್ಧಾರ ಮಾಡಿತ್ತು. ಆದರೆ, ಏನೋ ಪಡೆಯಲು ಹೋಗಿ ಇನ್ನೇನೋ ಕಳೆದುಕೊಂಡಂತೆ ಆಗಿದೆ ಕಂಪನಿ ಕಥೆ. ‘ವೆಚ್ಚ ಉಳಿತಾಯವೇ ನಮ್ಮ ಕಣ್ಮುಂದೆ ಇತ್ತು. ಆದರೆ, ಅಂತಿಮವಾಗಿ ಸಿಕ್ಕಿದ್ದು ಕಳಪೆ ಗುಣಮಟ್ಟದ ಸೇವೆ’ ಎಂಬುದನ್ನು ಕ್ಲಾರ್ನಾ ಗ್ರೂಪ್ ಸಂಸ್ಥೆಯ ಸಿಇಒ ಸೆಬಾಸ್ಟಿಯನ್ ಸೇಮಿಯಾಟೋವಸ್ಕಿ ಹೇಳುತ್ತಾರೆ.
ಎಐ ಅಳವಡಿಕೆಯತ್ತ ಗಮನ ಕೊಡುತ್ತಿದ್ದ ಕ್ಲಾರ್ನಾ ಕಂಪನಿಯು ಕಸ್ಟಮರ್ ಸಪೋರ್ಟ್ ವಿಭಾಗಕ್ಕೆ ಕಳೆದ ಒಂದು ವರ್ಷದಿಂದ ಯಾವ ನೇಮಕಾತಿಯನ್ನೂ ಮಾಡಲಿಲ್ಲವಂತೆ. ಈಗ ಕಂಪನಿಗೆ ಮನುಷ್ಯರ ಬೆಲೆ ಅರಿವಾಗಿದೆ. ‘ಮನುಷ್ಯರ ಗುಣಮಟ್ಟದ ಮೇಲೆ ನಂಬಿಕೆ ಇಡುವುದು ಎಷ್ಟು ಮುಖ್ಯ ಎಂಬುದು ಗೊತ್ತಾಯಿತು’ ಎಂದು ಹೇಳುತ್ತಾರೆ ಸಿಇಒ.
ಕಸ್ಟಮರ್ ಸಪೋರ್ಟ್ ಕೆಲಸಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ಕೊಡಲು ನಿರ್ಧರಿಸಿದೆ ಕ್ಲಾರ್ನಾ. ವಿದ್ಯಾರ್ಥಿಗಳೋ ಅಥವಾ ಗ್ರಾಮೀಣ ಭಾಗದ ಜನರೋ ಈ ಕೆಲಸ ಮಾಡಬಹುದು. ಗ್ರಾಹಕರಿಗೆ ತಮ್ಮ ಸಮಸ್ಯೆಗಳನ್ನು ತಿಳಿಸಲು ಎಐ ಚ್ಯಾಟ್ಬೋಟ್ ಬದಲು ಮನುಷ್ಯರ ಜೊತೆ ಮಾತನಾಡುವ ಅವಕಾಶ ಕೊಡುವುದು ಬಹಳ ಮುಖ್ಯ ಎಂಬ ಸತ್ಯವನ್ನು ಕಂಪನಿ ಕಂಡುಕೊಂಡಿದೆ.
ಸದ್ಯ ಕ್ಲಾರ್ನಾ ಗ್ರೂಪ್ನಲ್ಲಿ 3,000 ಮಂದಿ ಉದ್ಯೋಗಿಗಳಿದ್ದಾರೆ. ಎಐ ತಂತ್ರಜ್ಞಾನ ಅಳವಡಿಕೆಗೆ ಅದು ಸ್ಯಾಮ್ ಆಲ್ಟ್ಮ್ಯಾನ್ ಅವರ ಓಪನ್ ಎಐನ ನೆರವು ಪಡೆಯುತ್ತಿದೆ. 700 ಮನುಷ್ಯರು ಮಾಡುವ ಕೆಲಸವನ್ನು ಎಐ ಮಾಡುತ್ತಿದೆ ಎಂದು ಕಳೆದ ವರ್ಷ ಕ್ಲಾರ್ನಾ ಹೇಳಿತ್ತು. 700 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತು. ಅದಾದ ಬಳಿಕ ಹೊಸ ನೇಮಕಾತಿಯನ್ನೇ ನಿಲ್ಲಿಸಿತು. ಈಗ ನೇಮಕಾತಿ ಮಾಡಿಕೊಳ್ಳುತ್ತಿದೆಯಾದರೂ ಎಐ ಅಳವಡಿಕೆ ಕಾರ್ಯವನ್ನು ನಿಲ್ಲಿಸಿಲ್ಲ. ಮುಂಬರುವ ದಿನಗಳಲ್ಲಿ ಮನುಷ್ಯರ ಕೆಲಸಗಳಿಗೆ ಎಐ ಕುತ್ತು ತರುವ ಸಾಧ್ಯತೆ ಇಲ್ಲದಿಲ್ಲ.




