ಐಶ್ವರ್ಯಾ ರೈ ಬಚ್ಚನ್. ಪರಿಚಯದ ಅಗತ್ಯವೇ ಇಲ್ಲ. ಸೌಂದರ್ಯಕ್ಕೆ ಮತ್ತೊಂದು ಹೆಸರೇ ಐಶ್ವರ್ಯಾ. ಅಭಿನಯದ ವಿಚಾರದಲ್ಲಿ ಪ್ರತಿಭಾನ್ವಿತೆ. ನಡೆ – ನುಡಿಯಲ್ಲಿ ಪ್ರಬುದ್ಧೆ. ಇದು ಕೋಟ್ಯಂತರ ಐಶ್ ಅಭಿಮಾನಿಗಳ ಪ್ರಶಂಸೆಯ ಮಾತುಗಳು. ಎಂದಿನಂತೆ, ಇದೀಗ ವಿಶ್ವಪ್ರತಿಷ್ಠಿತ ವೇದಿಕೆಯಲ್ಲಿ ಹೆಜ್ಜೆ ಹಾಕಿ ಬಹುತೇಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಐಶ್.

ವಿಶ್ವಪ್ರತಿಷ್ಠಿತ ‘ಕೇನ್ಸ್ ಚಲನಚಿತ್ರೋತ್ಸ’ವದಲ್ಲಿ ದಿ ಮೋಸ್ಟ್ ಐಕಾನಿಕ್ ಇಂಡಿಯನ್ ಫೇಸ್ ಆಗಿ ಗುರುತಿಸಿಕೊಂಡಿರುವ ಐಶ್ವರ್ಯಾ ರೈ ಬಚ್ಚನ್, ಈ ವರ್ಷ ರೆಡ್ ಕಾರ್ಪೆರ್ಟ್ಗೆ ಆಕರ್ಷಕ ಜೊತೆಗೆ ಪವರ್ಫುಲ್ ನೋಟದೊಂದಿಗೆ ಮರಳಿದರು. ಕಳೆದ 2 ದಶಕಗಳಲ್ಲಿ ಕೇನ್ಸ್‌ನಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದ ಐಶ್ವರ್ಯಾ, ಈ ಬಾರಿ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿ ಆಚರಿಸುವ ನೋಟವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಸೀರೆ, ಸಿಂಧೂರದಲ್ಲಿ ಸೌಂದರ್ಯ ಪ್ರದರ್ಶನ: ಮಾಜಿ ವಿಶ್ವ ಸುಂದರಿ, ಈ ಸಾಲಿನ ಕೇನ್ಸ್‌ಗೆ ಸುಂದರ ಸೀರೆಯನ್ನು ಆರಿಸಿಕೊಂಡಿದ್ದಾರೆ. ಅದಕ್ಕೆ ಹೊಂದಿಕೆಯಾಗುವ ದುಪಟ್ಟಾವನ್ನೂ ಧರಿಸಿದ್ದರು. ಆದರಿಲ್ಲಿ ಸೀರೆಗಿಂತ ಹೆಚ್ಚಾಗಿ ನೆಟ್ಟಿಗರ ಗಮನ ಸೆಳೆದಿರುವುದು ವಿವಾಹಿತ ಭಾರತೀಯ ಮಹಿಳೆಯ ಸಾಂಪ್ರದಾಯಿಕ ಸಂಕೇತವಾದ ಸಿಂಧೂರ. ನಟಿಯ ಸಾಂಪ್ರದಾಯಿಕ ಸೊಬಗು ಬಹುತೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಮೇ 7ರಂದು ನಡೆದ ಭಾರತದ ಇತ್ತೀಚಿನ ‘ಆಪರೇಷನ್ ಸಿಂಧೂರ್’ ಶೀರ್ಷಿಕೆಯ ಮಿಲಿಟರಿ ಕಾರ್ಯಾಚರಣೆಗೆ ಸಂದ ಗೌರವ ಎಂದು ಅನೇಕ ಅಭಿಮಾನಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸೀರೆಗೆ ತಕ್ಕ ಆಭರಣಗಳು, ಮ್ಯಾಚಿಂಗ್ ಕಿವಿಯೋಲೆಗಳು ಮತ್ತು ರಿಂಗ್ ಅನ್ನು ಧರಿಸೋ ಮೂಲಕ ತಮ್ಮ ಸಾಂಪ್ರದಾಯಿಕ ನೋಟವನ್ನು ಪೂರ್ಣಗೊಳಿಸಿಕೊಂಡಿದ್ದರು. ರಿಚ್ ರೆಡ್ ಲಿಪ್‌ಸ್ಟಿಕ್, ಡಾರ್ಕ್ ಐಲೈನರ್ ಗಮನ ಸೆಳೆಯುವಂತಿತ್ತು. ತಮ್ಮ ಕೇಶರಾಶಿಯನ್ನು ಸೊಗಸಾಗಿ ಬಿಟ್ಟಿದ್ದರು.
ಮನೀಶ್ ಮಲ್ಹೋತ್ರಾ ಅವರ ರಚನೆ: ಐಶ್ವರ್ಯಾ ರೈ ಬಚ್ಚನ್ ಅವರ ನೋಟವನ್ನು ರಚಿಸಿದ ಬಾಲಿವುಡ್ನ ಪ್ರಮುಖ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ, ನಟಿಯ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಒಜಿ ಇಂಡಿಯನ್ ಕ್ವೀನ್ ಆಫ್ ಕೇನ್ಸ್ ಎಂದೂ ಕೂಡಾ ಗುಣಗಾನ ಮಾಡಿದ್ದಾರೆ.




