ದಾವಣಗೆರೆ: ಕೆಲಸಕ್ಕೆ ಹೋದ ವೇಳೆ ನರೇಗಾ ಕೂಲಿ ಕಾರ್ಮಿಕನೊಬ್ಬ ರಕ್ತ ವಾಂತಿ ಮಾಡಿ ಮೃತಪಪಟ್ಟ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಪಲ್ಲಾಗಟ್ಟಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಕೆಂಚಪ್ಪ (42) ಮೃತ ದುರ್ದೈವಿ.
ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರುಕುಂಟೆ ಕೆರೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ನರೇಗಾ ಯೋಜನೆ ಅಡಿ ನಡೆದಿದ್ದ ಕೂಲಿ ಕೆಲಸಕ್ಕೆ ಕಾರ್ಮಿಕ ಕೆಂಚಪ್ಪ ಆಗಮಿಸಿ ಕೆಲಸದಲ್ಲಿ ಭಾಗಿಯಾಗಿದ್ದರು . ಎಂದಿನಂತೆ ಇಂದು ಸಹ ಬೆಳಗ್ಗೆ ಕೆಲಸಕ್ಕೆ ಮುಂದಾಗಿದ್ದರು. ಆದರೆ, ಕೆಲಸ ಮಾಡಲು ತೆರಳಿದ್ದ ವೇಳೆ ಏಕಾಏಕಿ ರಕ್ತಕಾರಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಸಹ ಕಾರ್ಮಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಳಿಚೋಡು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇತ್ತೀಚೆಗಷ್ಟೇ ಟಾಟಾ ಏಸ್ ಪಲ್ಟಿಯಾಗಿ 29 ನರೇಗಾ ಕಾರ್ಮಿಕರು ಗಾಯಗೊಂಡಿದ್ದ ಘಟನೆ ಕಾರಟಗಿ ತಾಲೂಕಿನ ಬರಗೂರು ಕ್ರಾಸ್ನಲ್ಲಿ ನಡೆದಿತ್ತು. ತಾಲೂಕಿನ ಮುಸ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮದ ನರೇಗಾ ಕೂಲಿಕಾರರು, ಜೀರಾಳ ಕಲ್ಗುಡಿಯಲ್ಲಿನ ಕೆರೆ ಕಾಮಗಾರಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳದ ಜಿಲ್ಲಾಸ್ಪತ್ರೆಗೆ ರವಾನಿಸಿದ್ದರೆ ಉಳಿದ 26 ಜನರು ಗಂಗಾವತಿ ಉಪ ವಿಭಾಗ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು.




