ತುರುವೇಕೆರೆ: ತಾಲ್ಲೂಕಿನ ಮಾದಿಹಳ್ಳಿ ಶ್ರೀ ರಾಮಕೃಷ್ಣಾಶ್ರಮ ಶಾಲೆಯಲ್ಲಿ ವ್ಯಾಸಂಗ ಮಾಡಿ 10 ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ದೀಕ್ಷಾಳನ್ನು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಪುರಸ್ಕರಿಸಲಾಯಿತು.
ವಿದ್ಯಾರ್ಥಿನಿ ದೀಕ್ಷಾ ಪತ್ರಕರ್ತ ಸಚಿನ್ ಹಾಗೂ ಗಿರಿಜಾ ಅವರ ಪುತ್ರಿಯಾಗಿದ್ದು, 2024-25 ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾಳೆ. ಈ ಹಿನ್ನೆಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ವಿದ್ಯಾರ್ಥಿಯನ್ನು ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಸಮಾಜದಲ್ಲಿನ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ, ಅವರ ಸಾಧನೆಯನ್ನು ಪತ್ರಿಕೆಗಳಲ್ಲಿ ವರದಿ ಮಾಡಿ ಎಲ್ಲರಿಗೂ ತಿಳಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಾರೆ, ಆದರೆ ಪತ್ರಕರ್ತರ ಮಕ್ಕಳು ಸಾಧನೆಗೈದಾಗ ಗುರುತಿಸಿ ಪ್ರೋತ್ಸಾಹಿಸಲು ಯಾರೂ ಮುಂದಾಗದಿರುವುದು ಬೇಸರದ ಸಂಗತಿಯಾಗಿದೆ. ಪತ್ರಕರ್ತ ಸಚಿನ್ ದಂಪತಿಗಳ ಪುತ್ರಿ ದೀಕ್ಷಾ 10ನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿ ಶಾಲೆಗೆ, ಪೋಷಕರಿಗೆ ಕೀರ್ತಿ ತಂದಿದ್ದು, ಅವರ ಸಾಧನೆಯನ್ನು ಸಂಘ ಗುರುತಿಸಿ ಈ ದಿನ ಅಭಿನಂದಿಸಿದೆ. ಮುಂದಿನ ದಿನಗಳಲ್ಲಿ ಪತ್ರಕರ್ತ ಕುಟುಂಬದ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಅಭಿನಂದಿಸುವ ಕೆಲಸವನ್ನು ನಿರಂತರವಾಗಿ ಸಂಘ ಮಾಡಲಿದೆ ಎಂದರು.
ಪತ್ರಕರ್ತರ ಸಂಘದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿನಿ ದೀಕ್ಷಾ, ನನ್ನ ಈ ಸಾಧನೆಗೆ ಶಾಲೆಯ ಶಿಕ್ಷಕರು, ಪೋಷಕರು ಕಾರಣರಾಗಿದ್ದು, ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ತಂದೆಯ ಪತ್ರಕರ್ತ ಸಹೋದ್ಯೋಗಿಗಳು ತಮ್ಮ ಕುಟುಂಬದ ಮಗಳೆಂಬ ಭಾವನೆಯಿಂದ ಸಾಧನೆಯನ್ನು ಗುರುತಿಸಿ ಪುರಸ್ಕರಿಸಿರುವುದು ಸಂತೋಷ ತಂದಿದೆ ಹಾಗೂ ಇನ್ನೂ ಚೆನ್ನಾಗಿ ಓದಲು ಪ್ರೇರಣೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗಿ ಅಧ್ಯಯನ ಮಾಡಿ ಫೈಲಟ್ ಆಗಬೇಕೆಂಬ ಆಸೆಯಿದೆ ಎಂದರು.
ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಸತ್ಯನಾರಾಯಣ್, ಪತ್ರಕರ್ತರಾದ ನಾಗಭೂಷಣ್, ಎಂ.ಬಿ.ಹರೀಶ್, ಧರಣೀಶ್, ರಂಗಸ್ವಾಮಿ, ಬಾಬು, ಮನೋಹರ್, ಪಾಂಡುರಂಗಯ್ಯ, ಅರಸು, ಸ್ವರ್ಣ, ಮುಖಂಡ ರಂಗಸ್ವಾಮಿ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್




