ಬೆಂಗಳೂರು: ತಮಿಳು ನಟ ಕಮಲ್ ಹಾಸನ್ ವಿರುದ್ಧ ಕನ್ನಡಿಗರ ಆಕ್ರೋಶದ ಕಟ್ಟೆ ಒಡೆದಿದೆ. ಆದರೂ ನಟ ಮಾತ್ರ ಕ್ಷಮೆ ಕೇಳುತ್ತಿಲ್ಲ. ಕ್ಷಮೆ ಕೇಳುವ ಬದಲಿಗೆ ಕನ್ನಡಿಗರನ್ನು ಮತ್ತಷ್ಟು ಕೆಣಕುವ ಕೆಲಸ ಮಾಡಿದ್ದಾರೆ.
2 ದಿನಗಳಿಂದ ಕಮಲ್ ವಿರುದ್ಧ ಕನ್ನಡಿಗರು ಪ್ರತಿಭಟನೆ ನಡೆಸಿ ಕ್ಷಮೆಯಾಚಿಸಲು ಪಟ್ಟು ಹಿಡಿದಿದ್ದಾರೆ.ಆದರೂ ಕಮಲ್ ಹಾಸನ್ ಮತ್ತೊಮ್ಮೆ ಕ್ಷಮೆ ಕೇಳಲು ನಿರಾಕರಿಸಿದ್ದಾರೆ.
ಇದರ ಮಧ್ಯೆ ನಟಿ ರಚಿತಾ ರಾಮ್ ಕಮಲ್ ಹಾಸನ್ಗೆ ಚಾಟಿ ಬೀಸಿದ್ದಾರೆ. ಈ ಕುರಿತು ವೀಡಿಯೋ ಮಾಡಿರುವ ನಟಿ, ‘ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು..’ ಹಾಡಿನ ಮೂಲಕ ರಚಿತಾ ರಾಮ್ ಮಾತು ಆರಂಭಿಸಿದ್ದಾರೆ.
ನಾನು ಯಾಕೆ ಈ ಹಾಡು ಹೇಳುತ್ತಿದ್ದೇನೆ ಎಂಬುದು ನಿಮ್ಮೆಲ್ಲರಿಗೂ ಗೊತ್ತಾಗಿದೆ. ಕನ್ನಡ, ಕರ್ನಾಟಕ ಅಂತ ಬಂದರೆ ಪ್ರತಿಯೊಬ್ಬ ಕನ್ನಡಿಗನಿಗೂ ಇದು ಒಂದು ಎಮೋಷನ್. ನಮ್ಮ ಕನ್ನಡ ಭಾಷೆಯ ಬಗ್ಗೆ ಯಾರಾದರೂ ಟೀಕೆ ಮಾಡುತ್ತಿದ್ದಾರೆ ಎಂದರೆ ನಾವು ಸುಮ್ಮನೆ ಕೂರೋಕೆ ಆಗಲ್ಲ. ನಾವು ಕನ್ನಡದವರು ಎಷ್ಟು ವಿಶಾಲ ಹೃದಯದವರು ಎಂದರೆ ಎಲ್ಲ ಭಾಷೆಯ ಸಿನಿಮಾ ನೋಡುತ್ತೇವೆ, ಪ್ರತಿ ಭಾಷೆಯ ಸಿನಿಮಾ ಹಾಡುಗಳನ್ನು ಕೇಳುತ್ತೇವೆ. ಎಲ್ಲಾ ಭಾಷೆಯ ಕಲಾವಿದರಿಗೆ ಬೆಂಬಲ ಕೊಡುತ್ತೇವೆ. ಹಾಗೂ ತಂತ್ರಜ್ಞರನ್ನೂ ಕೂಡ ಒಪ್ಪಿಕೊಳ್ತಿವಿ, ಅಪ್ಪಿಕೊಳ್ತಿವಿ. ಆದರೆ ನಮ್ಮ ಭಾಷೆ ಬಗ್ಗೆ ಯಾರಾದರೂ ಮಾತನಾಡುತ್ತಿದ್ದಾರೆ ಎಂದಾಗ ನಾವು ಯಾಕೆ ಧ್ವನಿ ಎತ್ತಬಾರದು ಎಂದು ನಟಿ ಪ್ರಶ್ನಿಸಿದ್ದಾರೆ.
ನಾವು ಬೇರೆ ಯಾವುದೇ ಭಾಷೆಯನ್ನೂ ಟೀಕೆ ಮಾಡ್ತಾ ಇಲ್ಲ. ಆದರೆ ನಮ್ಮ ಭಾಷೆಯನ್ನು ಯಾರಾದ್ರೂ ಟೀಕೆ ಮಾಡಿದ್ರೆ ಖಂಡಿತವಾಗಿಯೂ ನಾವು ಸಮ್ಮನೆ ಕೂರೋದಕ್ಕೆ ಆಗಲ್ಲ. ನಮ್ಮ ಭಾಷೆಯ ಬಗ್ಗೆ ನಮಗೆ ಖಂಡಿತಾ ಹೆಮ್ಮೆ ಇರಲೇಬೇಕು ಎಂದಿದ್ದಾರೆ.




