ಬೆಳಗಾವಿ: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬೆಳಗಾವಿ ಲೋಕಾಯುಕ್ತ ಪೊಲೀಸ್ ತಿಳಿಸಿದ್ದಾರೆ.
ಈ ಬಗ್ಗೆ ದೂರುದಾರರಾಗಿರುವ ಸಾಮಾಜಿಕ ಕಾರ್ಯಕರ್ತ ಸುಜಿಲ್ ಮುಲ್ಗುಡ್ ಮಾತನಾಡಿದ್ದು, ಅಭಯ ಪಾಟೀಲ್ ಅವರ ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ಸಂಪಾದನೆ ಸಂಬಂಧ ನಾನು 2012ರಿಂದಲೂ ಹೋರಾಟ ಮಾಡುತ್ತಿದ್ದೇನೆ.
ಲೋಕಾಯುಕ್ತ ಅಧಿಕಾರಿಗಳಿಗೆ ದಾಖಲೆ ಸಮೇತ ದೂರು ಕೂಡ ನೀಡಿದ್ದೆ. ಈ ಹಿಂದೆ ಹೈಕೋರ್ಟ್ ಮೊರೆಹೋಗಿದ್ದ ಅಭಯ ಪಾಟೀಲ, ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸದಂತೆ ಆದೇಶ ಪಡೆದಿದ್ದರು. ಆಗ ನಮಗೆ ಹಿನ್ನಡೆ ಆಗಿತ್ತು ಎಂದರು.
ಬಳಿಕ ನಾನು ಸುಪ್ರೀಂಕೋರ್ಟ್‌ಗೆ ಹೋಗಿ ಪ್ರಕರಣ ದಾಖಲಿಸುವಂತೆ ಹೋರಾಟ ಮಾಡಿದ್ದೇನೆ. ಮೇ 21, 2025 ರಂದು ಬೆಳಗಾವಿಯ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಸಲ್ಲಿಸಿದ್ದಾರೆ. ಆದರೆ, ಶಾಸಕರ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ವಿಳಂಬ ಮಾಡಲಾಯಿತು ಎಂದು ಹೇಳಿದ್ದಾರೆ.




