ತುರುವೇಕೆರೆ: ಹೇಮಾವತಿ ಲಿಂಕ್ ಕೆನಾಲ್ ಹೋರಾಟದ ಕಾರಣ ತುರುವೇಕೆರೆ ಶಾಸಕರ ಮೇಲೆ ಎಫ್.ಐ.ಆರ್. ದಾಖಲಿಸಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಅವರೊಂದಿಗೆ ದೂರವಾಣಿ ಮೂಲಕ ಹೋರಾಟದ ಪ್ರಗತಿ ಹಾಗೂ ಪ್ರಕರಣ ದಾಖಲಿಸಿರುವ ಬಗ್ಗೆ ಚರ್ಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ಕರೆ ಮಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಕೃಷ್ಣಪ್ಪನವರೇ ಎ1 ಆರೋಪಿಯನ್ನಾಗಿಸಿರುವ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಯಿಸಿದ ಎಂ.ಟಿ.ಕೃಷ್ಣಪ್ಪ, ಎ1 ಆರೋಪಿ ನಾನಾ..? ಮಾಡಲಿ ಬಿಡಣ್ಣ.. ರೈತಪರ ಹೋರಾಟ ಮಾಡುತ್ತಿದ್ದೇನೆ. ಸರ್ಕಾರ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದಕ್ಕೆಲ್ಲಾ ಹೆದರುವ ಪ್ರಶ್ನೆಯೇ ಇಲ್ಲ. ರೈತರಿಗಾಗಿ ಜೈಲಿಗೆ ಹೋಗಲು ಸಿದ್ದನಿದ್ದೇನೆ. ಜೈಲಿನಲ್ಲಿ ಮುದ್ದೆ ಊಟ ಕೊಡ್ತಾರೆ, ಊಟ ಮಾಡಣ್ಣ ಬಿಡಣ್ಣ ಎಂದರು. ಇದಲ್ಲದೆ ನೀವು ಯಾವುದೇ ಹೇಳಿಕೆ ನೀಡಬೇಡಿ ಎಂದ ಶಾಸಕರು, ನಿಖಿಲ್ ಕುಮಾರಸ್ವಾಮಿಗೂ ಈ ಬಗ್ಗೆ ಹೇಳಿಕೆ ನೀಡದಂತೆ ತಿಳಿಸಿದ್ದೇನೆ, ನೀವೊಮ್ಮೆ ಅವರಿಗೆ ಸೂಚಿಸಿ ಎಂದರು.
ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯಿಂದಾಗಿ ತುಮಕೂರು ಜಿಲ್ಲೆಯ 28 ಲಕ್ಷ ರೈತರ ಬದುಕು ಸರ್ವನಾಶವಾಗುತ್ತದೆ. ಕುಡಿಯುವ ನೀರಿಗೂ ತತ್ವಾರ ಏರ್ಪಡಲಿದೆ. ಈ ಹಿನ್ನೆಲೆಯಲ್ಲಿ ಹೋರಾಟ ಅನಿವಾರ್ಯವಾಗಿದೆ. ಯಾವುದೇ ಕಾರಣಕ್ಕೂ ಕಾಮಗಾರಿ ಮುಂದುವರೆಸಲು ಬಿಡುವುದಿಲ್ಲ. ಜೈಲಿಗೆ ಹಾಕಿದರೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ತಿಳಿಸಿದರು.
ಎಂ.ಟಿ.ಕೃಷ್ಣಪ್ಪ ಅವರ ರೈತಪರ ನಿಲುವಿಗೆ ಹಾಗೂ ರೈತರಿಗಾಗಿ ಜೈಲಿಗೆ ತೆರಳಲು ಸಿದ್ದವಿರುವ ಧೈರ್ಯ ಹಾಗೂ ಹೋರಾಟದ ಮನೋಭಾವದ ಬಗ್ಗೆ ಮೆಚ್ಚುಗೆ ಕೇಂದ್ರ ಸಚಿವ ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ: ಗಿರೀಶ್ ಕೆ ಭಟ್




