ತುರುವೇಕೆರೆ: ರೈತಾಪಿ ವರ್ಗ ದುಡಿಮೆಯನ್ನು ಮಾಡದಿದ್ದರೆ, ನೆಮ್ಮದಿಯ ಬದುಕನ್ನು ಸಾಗಿಸದಿದ್ದರೆ ಮುಂದೊಂದು ಇಡೀ ವಿಶ್ವ ಭಿಕ್ಷೆ ಎತ್ತಬೇಕಾಗುತ್ತದೆ ಎಂದು ಕೃಷಿತೋ ನಾಸ್ತಿ, ದುರ್ಭಿಕ್ಷಃ ಎಂಬ ಮಾತನ್ನು ಉಲ್ಲೇಖಿಸಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಪರಿವರ್ತನ ಇಕೋ ರೈತ ಉತ್ಪಾದಕರ ಕಂಪನಿ ವತಿಯಿಂದ ಸ್ವಾವಲಂಬನಾ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಅವರು, ರೈತ ದೇಶದ ಬೆನ್ನೆಲುಬು. ತಾನು, ತನ್ನ ಹಕ್ಕು ಎಂದು ಕೃಷಿಯನ್ನು ಮಾಡಿದರೆ ಸಾಕಷ್ಟು ಜನರ ಬದುಕನ್ನು ಕಟ್ಟಿಕೊಡಲು ಸಾಧ್ಯವಿರುವ ಏಕೈಕ ವ್ಯಕ್ತಿ ಅಂದರೆ ಅದು ರೈತ ಮಾತ್ರ. ರೈತ ಕಷ್ಟಪಟ್ಟು ದುಡಿಯುತ್ತಾನೆ, ಬೆಳೆ ಬೆಳೆಯುತ್ತಾನೆ, ದೇಶಕ್ಕೆ ಅನ್ನ ನೀಡುತ್ತಾನೆ, ಆದರೆ ಮಧ್ಯವರ್ತಿಗಳ ಹಾವಳಿಯಿಂದ ತಾನು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೆ ಇರುವುದು ದುರಂತ ಎಂದರು.
ಪ್ರಸ್ತುತ ಸಾಂಪ್ರದಾಯಿಕ ಕೃಷಿ ಪದ್ಧತಿ ಬಹಳ ಉತ್ತಮವಾಗಿದೆ, ಈ ಪದ್ದತಿಯೊಡನೆ ವೈಜ್ಞಾನಿಕ ಪದ್ಧತಿ ಹಾಗೂ ಉಪಕರಣಗಳ ಅಳವಡಿಕೆಯ ಮೂಲಕ ಕೃಷಿಯನ್ನು ಮತ್ತಷ್ಟು ಉತ್ತಮಗೊಳಿಸಬಹುದಾಗಿದೆ. ಜನರು ರಾಸಾಯನಿಕ ಮಿಶ್ರಿತ ಕಲಬೆರಕೆ ವಸ್ತುಗಳನ್ನು ಖರೀದಿಸಲು ಇಷ್ಟಪಡುವುದಿಲ್ಲ. ಅದೇ ರೀತಿ ಉತ್ತಮ ಸತ್ವವುಳ್ಳ ಪದಾರ್ಥಗಳನ್ನು ಖರೀದಿಸಲು ಹಿಂಜರಿಯುವುದಿಲ್ಲ. ಕೃಷಿಯಲ್ಲಿ ವೈಜ್ಞಾನಿಕ ಚಿಂತನೆಯ ಅಗತ್ಯವಿದೆ, ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆಯ ಅಗತ್ಯವಿದೆ. ರೈತರು ಬೆಳೆದ ಬೆಳೆಯನ್ನು ಸ್ವತಃ ತಾವೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಉತ್ತಮ ಬೆಲೆ ಪಡೆಯಬೇಕೆನ್ನುವ ಹಿನ್ನೆಲೆಯಲ್ಲಿ ಮಾಯಸಂದ್ರ ಟಿ.ಬಿ.ಕ್ರಾಸಿನಲ್ಲಿ ರೈತಸಂತೆ ಪ್ರಾರಂಭಿಸಿದೆವು, ಆದರೆ ನಾವಂದುಕೊಂಡ ಮಟ್ಟದಲ್ಲಿ ಸಾಕಾರಗೊಂಡಿಲ್ಲ ಎಂದ ಅವರು, ರೈತರು ತೆಂಗನ್ನು ಮಾತ್ರ ನಂಬಿ ಬದುಕುವುದನ್ನು ಬಿಟ್ಟು ಸಮಗ್ರ ಕೃಷಿ ಮಾಡಬೇಕು, ಸಮಗ್ರ ಕೃಷಿಯಿಂದ ರೈತರ ಆರ್ಥಿಕ ಮಟ್ಟ ಸುಧಾರಣೆಗೊಳ್ಳಲಿದೆ ಎಂದ ಅವರು, ಪ್ರಮುಖವಾಗಿ ರೈತರು ಹಳ್ಳಿಯನ್ನು ಬಿಟ್ಟು ಪಟ್ಟಣದ ಚಹಾ ಅಂಗಡಿಯಲ್ಲಿ ಕುಳಿತು ದಿಲ್ಲಿಯ ವಿಚಾರ ಮಾತನಾಡಿದರೆ ಯಾವುದೇ ಪ್ರಯೋಜನವಿಲ್ಲ. ವೈಜ್ಞಾನಿಕ ಪದ್ದತಿ ಅಳವಡಿಸಿಕೊಂಡು ಕೃಷಿಯನ್ನು ಮಾಡಿ, ಆರ್ಥಿಕವಾಗಿ ಅಭಿವೃದ್ದಿ ಹೊಂದಿ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ, ವ್ಯವಸಾಯದಲ್ಲಿ ರೈತ ಕುಟುಂಬ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಪ್ರಸ್ತುತ ಭೂಮಿಗೆ ಉತ್ತಮ ಬೆಲೆ ಇದೆ. ರೈತರು ಬೆಳೆದ ಬೆಲೆಗೆ ಉತ್ತಮ ಮಾರುಕಟ್ಟೆ ಒದಗಿಸಿಕೊಡಬೇಕೆಂಬ ಉದ್ದೇಶದಿಂದ ಕಂಪನಿ ಸ್ಥಾಪಿತವಾಗುತ್ತಿದೆ. ಸೊಸೈಟಿ ಪ್ರಾರಂಭವಾಗುತ್ತದೆ, ಕೆಲವೇ ದಿನದಲ್ಲಿ ಮುಚ್ಚುಹೋಗುತ್ತದೆ. ಅಂತಹ ಕೆಲಸವಾಗದೆ ರೈತರಿಗೆ ಕೃಷಿ ಬಗ್ಗೆ ಮಾಹಿತಿ ನೀಡಿ, ರೈತರು ಬೆಳೆದ ಬೆಲೆಗೆ ಉತ್ತಮ ಮಾರುಕಟ್ಟೆ ಒದಗಿಸಿ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವತ್ತ ಕಂಪನಿ ಮುಂದಾಗಬೇಕೆಂದರು.
ಸಮಾರಂಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪೂಜಾ, ಕೃಷಿಕ ಸಮಾಜದ ಅಧ್ಯಕ್ಷ ಶ್ರೀಕಾಂತ್, ಪರಿವರ್ತನ ಇಕೋ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಶಿವಕುಮಾರ್, ಸ್ವರ್ಣಭೂಮಿ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಬಸವರಾಜ್, ಉಪಾಧ್ಯಕ್ಷ ಕುಮಾರಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶ್, ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ಶೇಖರ ಶೆಟ್ಟಿ, ನಿವೃತ್ತ ಉಪನ್ಯಾಸಕ ಮಂಜೇಗೌಡ, ಕೊಪ್ಪ ನಾಗೇಶ್ ಸೇರಿದಂತೆ ರೈತರು, ನಾಗರೀಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




