ಬೆಂಗಳೂರು : ಚೊಚ್ಚಲ ಐಪಿಎಲ್ ಗೆದ್ದ ಆರ್ಸಿಬಿ ತಂಡ ಬೆಂಗಳೂರಿಗೆ ಆಗಮಿಸಿದೆ. ಈಗಾಗಲೇ ಭವ್ಯ ಸ್ವಾಗತ ಕೋರಲಾಗಿದ್ದು, ತಮ್ಮ ನೆಚ್ಚಿನ ತಂಡದ ಆಟಗಾರರನ್ನು ಕಣ್ತುಂಬಿಕೊಳ್ಳುವ ಫ್ಯಾನ್ಸ್ ಆಸೆಗೆ ತಣ್ಣೀರುಬಿದ್ದಿದೆ.
ಆರ್ಸಿಬಿ ಆಟಗಾರರ ಓಪನ್ ಪರೇಡ್ ಗೆ ಸರ್ಕಾರ ರೆಡ್ ಸಿಗ್ನಲ್ ಕೊಟ್ಟಿದೆ.ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದು, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ. ಆದರೆ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂ ವರೆಗೂ ತೆರೆದ ವಾಹನದಲ್ಲಿ ಆರ್ಸಿಬಿ ಆಟಗಾರರಿಗೆ ಮೆರವಣಿಗೆ ಇರುವುದಿಲ್ಲ ಎಂದಿದ್ದಾರೆ.
ಭದ್ರತೆಯ ದೃಷ್ಟಿಯಿಂದ ತೆರೆದ ವಾಹನದಲ್ಲಿ ಆರ್ಸಿಬಿ ಆಟಗಾರರಿಗೆ ಮೆರವಣಿಗೆ ಮಾಡಲ್ಲ. ಆರ್ಸಿಬಿ ತಂಡದ ಆಟಗಾರರಿಗೆ ಸರಕಾರದಿಂದ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಅಭಿನಂದನೆ ಸಲ್ಲಿಸಲಾಗುವುದು ಎಂದು ಪರಂ ಹೇಳಿದ್ದಾರೆ.
ಸಂಜೆ 5 ಕ್ಕೆ ಕಾರ್ಯಕ್ರಮ..!
ವಿಧಾನಸೌಧದ ಮುಂಭಾಗ ಆರ್ಸಿಬಿ ಆಟಗಾರರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಟಿಕೆಟ್ ಹಾಗೂ ಪಾಸ್ ಹೊಂದಿದ್ದ ಜನರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.
ಟ್ರಾಫಿಕ್ ಸಮಸ್ಯೆ ಉದ್ಭವವಾಗುವ ಕಾರಣ ಸಾರ್ವಜನಿಕ ಸಾರಿಗೆ ಬಳಸುವಂತೆ ಕೋರಲಾಗಿದೆ. ಮಧ್ಯಾಹ್ನ 3 ಗಂಟೆ ಯಿಂದ ರಾತ್ರಿ 8 ರವರೆಗೆ ವಿಧಾನಸೌಧದ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದ್ದು, ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಚಿನ್ನ ಸ್ವಾಮಿ ಸ್ಟೇಡಿಯಂ ಬಳಿ ವಾಹನ ದಟ್ಟಣೆ ಹೆಚ್ಚುವ ಸಂಭವವಿದ್ದು ವಾಹನ ಸವಾರರಿಗೆ ಮುಂಜಾಗೃತೆ ವಹಿಸುವಂತೆ ಕೋರಲಾಗಿದೆ.




