ತುರುವೇಕೆರೆ : ಮಕ್ಕಳ ಬೌದ್ಧಿಕ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸರ್ಕಾರಿ ಶಾಲೆಗಳು ಪೂರಕವಾಗಿ ಕೆಲಸ ಮಾಡುತ್ತಿವೆ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ತಿಳಿಸಿದರು.
ಸಿ.ಎಸ್.ಪುರ ಹೋಬಳಿಯ ಚಿಕ್ಕ ಚೆಂಗಾವಿ ಗ್ರಾಮದಲ್ಲಿ ರೈತ ಪ್ರಕಾಶ್ ನಿರ್ಮಿಸಿರುವ ನೂತನ ಸರ್ಕಾರಿ ಶಾಲೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ನುರಿತ ವಿಷಯತಜ್ಞ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ, ಬೌದ್ದಿಕ ಹಾಗೂ ವ್ಯಕ್ತಿತ್ವ ಸುಧಾರಣೆಗೆ ಅಗತ್ಯವಿರುವಂತಹ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ನೀಡಲಾಗುತ್ತಿದೆ. ಪೋಷಕರು ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಾರುವಾಗದೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಬೆಂಬಲವಾಗಿ ನಿಲ್ಲಬೇಕು ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ಮಾಡಬೇಕು. ಬಾಲ್ಯದಲ್ಲಿ ನಾನು ಕೂಡ ಸರ್ಕಾರಿ ಶಾಲೆಯಲ್ಲಿಯೇ ವ್ಯಾಸಂಗ ಮಾಡಿದ್ದು, ಅಂದು ನನಗೆ ಶಿಕ್ಷಣ ನೀಡಿ, ಬದುಕಿಗೆ ಮಾರ್ಗದರ್ಶನ ಮಾಡಿದ ಶಿಕ್ಷಕರನ್ನು ಇಂದಿಗೂ ನಾನು ನೆನೆಯುತ್ತೇನೆ. ಕಾರಣ ಅಂದು ಸರ್ಕಾರಿ ಶಾಲೆಯ ಶಿಕ್ಷಕರು ನೀಡಿದ ಶಿಕ್ಷಣ ಇಂದು ನನ್ನನ್ನು ಶಾಸಕನನ್ನಾಗಿ ಮಾಡಿದೆ ಹಾಗೂ ದೊಡ್ಡ ಮಸಾಲಾ ಸಂಸ್ಥೆಯ ಉದ್ಯಮಿಯನ್ನಾಗಿ ಮಾಡಿ ಸಾವಿರಾರು ಜನರಿಗೆ ಉದ್ಯೋಗವನ್ನು ನೀಡುವಷ್ಟರ ಮಟ್ಟಿಗೆ ಜ್ಞಾನವನ್ನು ನೀಡಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ರೈತ ಸಿ.ಕೆ.ಪ್ರಕಾಶ್ ಅವರು ಮಕ್ಕಳಿಗಾಗಿ ಶಾಲೆಗೆ ಕಟ್ಟಡವನ್ನು ಕಟ್ಟಿಸಿಕೊಟ್ಟಿದ್ದಾರೆ. ಇಂತಹ ಮಹತ್ತರ ಕಾರ್ಯದಲ್ಲಿ ಪ್ರತಿಯೊಬ್ಬರು ಭಾಗಿಯಾಗಬೇಕೆಂದ ಅವರು, ನಾನು ಕೂಡ ಈ ಶಾಲೆಗೆ ಅಕ್ಷರ ದಾಸೋಹ ಕಟ್ಟಡವನ್ನು ನಿರ್ಮಿಸಿ ಕೊಡುತ್ತೇನೆಂದು ಭರವಸೆ ನೀಡಿದರು.
ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ, ಮನುಷ್ಯ ತನ್ನ ದುಡಿಮೆಯ ಒಂದು ಭಾಗವನ್ನು ಸಮಾಜ ಸೇವೆಗೆ ನೀಡುವ ಮೂಲಕ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ರೈತ ಪ್ರಕಾಶ್ ಅವರ ಕಾರ್ಯ ಶ್ಲಾಘನೀಯವಾದದ್ದು. ಪ್ರತಿಯೊಬ್ಬರೂ ಸರ್ಕಾರಿ ಕೆಲಸಗಳನ್ನು ಉಳಿಸುವ ಕೆಲಸದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಮಸಾಲಾ ಜಯರಾಮ್ ಅವರನ್ನು ಹಾಗೂ ಶಾಲೆಗೆ ಕಟ್ಟಡ ನಿರ್ಮಾಣ ಮಾಡಿಕೊಟ್ಟ ರೈತ ಸಿ.ಕೆ.ಪ್ರಕಾಶ್ ದಂಪತಿಗಳನ್ನು ಸನ್ಮಾನಿಸಲಾಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು, ಬಿಇಓ ನಟರಾಜ್, ಎಚ್.ಲೇಪಾಕ್ಷಿಪ್ಪ, ವೆಂಕಟೇಗೌಡ, ಸಿ.ಕೆ.ಪ್ರಕಾಶ್, ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಗೋವಿಂದರಾಜು, ಹನುಮಂತರಾಯಪ್ಪ, ಜಗದೀಶ್, ಅಶ್ವತ್ತೆಗೌಡ, ವೇದಾವತಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.
ವರದಿ: ಗಿರೀಶ್ ಕೆ ಭಟ್




