Ad imageAd image

ಜೂ.14 ರಂದು ತುರುವೇಕೆರೆಯಲ್ಲಿ ಲಯನ್ಸ್ ಭವನ ಲೋಕಾರ್ಪಣೆ

Bharath Vaibhav
ಜೂ.14 ರಂದು ತುರುವೇಕೆರೆಯಲ್ಲಿ ಲಯನ್ಸ್ ಭವನ ಲೋಕಾರ್ಪಣೆ
WhatsApp Group Join Now
Telegram Group Join Now

ತುರುವೇಕೆರೆ : ಪಟ್ಟಣದ ವಿರಕ್ತಮಠದ ಬಳಿ ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್, ಲಯನ್ಸ್ ಕ್ಲಬ್ ವತಿಯಿಂದ ಸುಮಾರು ಎರಡು ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಲಯನ್ಸ್ ಭವನವನ್ನು ಜೂನ್ 14 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಲೋಕಾರ್ಪಣೆಗೊಳಿಸಲಾಗುವುದು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್.ಆರ್.ರಂಗನಾಥ್ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 35 ವರ್ಷಗಳಿಂದ ತಾಲ್ಲೂಕಿನಾದ್ಯಂತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ, ಆರೋಗ್ಯ ಶಿಬಿರ, ಪರಿಸರ ಸಂರಕ್ಷಣೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಅಶಕ್ತರಿಗೆ, ಅಸಹಾಯಕರಿಗೆ ಸಹಾಯ, ಜಾಗೃತಿ ಜಾಥಾ, ಸಾಮಾಜಿಕ ಬದ್ಧತೆಯೊಂದಿಗೆ ಹತ್ತಾರು ರೀತಿಯ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಪ್ರೀತಿ, ವಿಶ್ವಾಸ, ನಂಬಿಕೆಗೆ ಮತ್ತೊಂದು ಹೆಸರೇ ಲಯನ್ಸ್ ಎಂಬಂತೆ ತಾಲೂಕಿನ ಜನರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನವನ್ನು ಪಡೆದಿದೆ. ಇಂತಹ ಲಯನ್ಸ್ ಸಂಸ್ಥೆಗೆ ಸೇವಾ ಚಟುವಟಿಕೆ ನಡೆಸಲು ಬೇರೊಬ್ಬರನ್ನು ಆಶ್ರಯಿಸಬೇಕಿತ್ತು, ಸ್ವಂತ ಕಟ್ಟಡವಿಲ್ಲದ ಕೊರಗು ನಮ್ಮೆಲ್ಲರನ್ನು ಕಾಡಿತ್ತು. ಈ ಪರಿಸ್ಥಿತಿಯಲ್ಲಿ ಹಿರಿಯ ವೈದ್ಯ, ಸಂಸ್ಥಾಪಕ ಕಾರ್ಯದರ್ಶಿ ಡಾ.ಎ.ನಾಗರಾಜ್ ಅವರ ಆಶಯದಂತೆ ಸ್ವಂತ ಕಟ್ಟಡ ನಿರ್ಮಿಸುವ ಗುರಿಯನ್ನು ಹೊಂದಿ ಅದಕ್ಕೆ ಬೇಕಾದ ನಿವೇಶನವನ್ನು ಖರೀದಿಸಿ ಈಗ ಕಟ್ಟಡ ನಿರ್ಮಾಣದ ಬಹುದೊಡ್ಡ ಕನಸು ನನಸಾಗಿದೆ ಎಂದರು.

ಲಯನ್ಸ್ ನೂತನ ಭವನ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆಯವರು 2 ಲಕ್ಷ ನೀಡಿ ಆರ್ಶೀವದಿಸಿದ್ದರು. ಸಂಸದ ವಿ.ಸೋಮಣ್ಣನವರು 5 ಲಕ್ಷ ರೂ ನೀಡುವ ಭರವಸೆ ನೀಡಿದ್ದಾರೆ. ಉಳಿದಂತೆ ಡಾ.ನಾಗರಾಜ್ ಅವರು ಹೆಚ್ಚಿನ ಸಹಾಯ ಮಾಡಿದ್ದಾರೆ. ಇವರಲ್ಲದೆ ಬೆಂಗಳೂರಿನ ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಪಿಆರ್.ಎಸ್. ಚೇತನ್, ನಾಗರಾಜ್ ಭೈರಿ, ಪ್ರಭಾಮೂರ್ತಿ, ಕೊಬ್ಬರಿ ವರ್ತಕ ಎಂ.ಡಿ.ಮೂರ್ತಿ, ನೇತ್ರಾ ಗ್ರೂಪ್ಸ್ ನ ಸೆಲ್ವರಾಜ್, ಮಾಚೇನಹಳ್ಳಿ ಮಲ್ಲಿಕಾರ್ಜುನ್, ಮುನಿಯೂರಿನ ಚಿದಂಬರ್, ಕಲ್ಕೆರೆ ರಾಘು ಸೇರಿದಂತೆ ಹಲವು ಉದಾರವಾಗಿ ಧನಸಹಾಯ ಮಾಡಿದ್ದಾರೆ. ಭವನ ನಿರ್ಮಾಣಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ನೆರವಾದ ಎಲ್ಲರನ್ನೂ ಕಾರ್ಯಕ್ರಮದಂದು ಸನ್ಮಾನಿಸಲಾಗುವುದು ಎಂದರು.

ಜೂನ್ ೧೩ರಂದು ಲಯನ್ಸ್ ಭವನದಲ್ಲಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ವಿರಕ್ತಮಠದ ಶ್ರೀ ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಪೂಜೆ, ಹೋಮ ಹವನಗಳು ನೆರವೇರಲಿದೆ. ಜೂನ್ ೧೪ರಂದು ಬೆಳಿಗ್ಗೆ ನಾಗರೀಕರಿಗಾಗಿ ಬಿ.ಪಿ., ಶುಗರ್, ಹೆಬ್.ಬಿ.ಎ.1ಸಿ. ಹಾಗೂ ಬೋನ್ ಮಿನರಲ್ ಡೆನ್ಸಿಟಿ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದು, ನಾಗರೀಕರು ಇದರ ಅನುಕೂಲ ಪಡೆದುಕೊಳ್ಳುವಂತೆ ಕೋರಿದರು. ಜೂನ್ 14 ರ ಬೆಳಿಗ್ಗೆ 10.30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಗಳೇ ದಿವ್ಯ ಸಾನಿದ್ಯ ವಹಿಸಲಿದ್ದು, ಕೇಂದ್ರ ರೈಲ್ವೆ ಖಾತೆ ಮತ್ತು ಜಲಶಕ್ತಿ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಭವನ ಉದ್ಘಾಟಿಸಲಿದ್ದಾರೆ.

ವೇದಿಕೆ ಕಾರ್ಯಕ್ರಮವನ್ನು ಶಾಸಕ ಎಂ.ಟಿ.ಕೃಷ್ಣಪ್ಪ, ಲಯನ್ಸ್ ಕಛೇರಿಯನ್ನು ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ನೆಲಮಹಡಿಯ ಮಳಿಗೆಗಳನ್ನು ಮಾಜಿ ಶಾಸಕ ಮಸಾಲಾ ಜಯರಾಮ್, ಲಯನ್ಸ್ ಸಭಾಂಗಣವನ್ನು ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಡಾ.ನಾಗರಾಜ್ ಅವರು ಉದ್ಘಾಟಿಸಲಿದ್ದಾರೆ. ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪಿ.ಹೆಚ್.ಧನಪಾಲ್ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ರಾಜ್ಯಪಾಲ ಮೋಹನ್ ಕುಮಾರ್, ಡಿ.ಎಲ್.ಎಸ್.ಎಫ್. ಛೇರ್ಮನ್ ಸುರೇಶ್ ರಾಮು, ನಿಮ್ಹಾನ್ಸ್ ಮಾಜಿ ನಿರ್ದೇಶಕ ಡಾ.ಡಿ.ನಾಗರಾಜು, ಪಪಂ ಅಧ್ಯಕ್ಷೆ ಸ್ವಪ್ನ ನಟೇಶ್ ಸೇರಿದಂತೆ ಲಯನ್ಸ್ 317ಎ ಜಿಲ್ಲೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಾಗರೀಕರು ಆಗಮಿಸಲಿದ್ದಾರೆಂದರು.

ಗೋಷ್ಟಿಯಲ್ಲಿ ಲಯನ್ಸ್ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಮಹೇಶ್, ಖಜಾಂಚಿ ಟಿಎವಿ ಗುಪ್ತ, ಪದಾಧಿಕಾರಿಗಳಾದ ಡಾ.ಎ.ನಾಗರಾಜ್, ಗಂಗಾಧರ ದೇವರಮನೆ, ಸುನಿಲ್ ಬಾಬು, ಸುಮಾಮಲ್ಲಿಕ್, ಮಲ್ಲಿಕಾರ್ಜುನ್, ಮಿಹಿರಾಕುಮಾರ್, ರಾಮಕೃಷ್ಣ, ರಾಜಣ್ಣ, ಸಚಿನ್, ಕೈಲಾಶ್ ಸೇರಿದಂತೆ ಹಲವರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!