ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಸರ್ಕಾರ ಜನರಿಗೆ ಬಂಪರ್ ಆಫರ್ ವೊಂದನ್ನು ನೀಡಿದ್ದು, ದಂಪತಿಗಳು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದರೆ ಅಂತಹ ಕುಟುಂಬಗಳಿಗೆ ಸರ್ಕಾರದ ಕಡೆಯಿಂದ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದೆ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರನ್ನು ಪಂಚಾಯತ್ ಮತ್ತು ಪುರಸಭೆಯ ಚುನಾವಣೆಗಳಲ್ಲಿ ಅನರ್ಹರೆಂದು ಪರಿಗಣಿಸಲಾಗಿತ್ತು.
ಈಗ ಈ ನೀತಿಯನ್ನು ರದ್ದುಗೊಳಿಸಲಾಗಿದೆ ಮತ್ತು ಹೆಚ್ಚಿನ ಮಕ್ಕಳನ್ನು ಹೊಂದಿರುವ ಕುಟುಂಬಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
2023 ರಲ್ಲಿ, ಸಿಕ್ಕಿಂ ಸರ್ಕಾರವು ಸ್ಥಳೀಯ ಜನರು ಹೆಚ್ಚಿನ ಮಕ್ಕಳನ್ನು ಹೊಂದಲು ಪ್ರೋತ್ಸಾಹ ಧನವನ್ನು ಘೋಷಿಸಿತ್ತು. ಮಿಜೋರಾಂ ಕೂಡ ಬುಡಕಟ್ಟು ದಂಪತಿಗಳು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸುತ್ತಿದೆ. ಅದರಂತೆ ದಕ್ಷಿಣ ಭಾರತದಲ್ಲೂ ಈ ನೀತಿ ಅಳವಡಿಸಿಕೊಳ್ಳಬೇಕು ಎಂದು ಚಂದ್ರಬಾಬು ತಿಳಿಸಿದರು.
ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದರೆ ಅಂತಹ ಕುಟುಂಬಕ್ಕೆ ಸರ್ಕಾರದಿಂದಲೇ ಅಗತ್ಯ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.
ಉದ್ಯೋಗಿ ತಾಯಂದಿರು ಮಕ್ಕಳನ್ನು ನೋಡಿಕೊಳ್ಳುವಲ್ಲಿ ಸಹಾಯ ಪಡೆಯಲು ರಾಜ್ಯ ಸರ್ಕಾರವು ಎಲ್ಲಾ ಸಂಸ್ಥೆಗಳು ಕೆಲಸದ ಸ್ಥಳಗಳಲ್ಲಿ ಮಕ್ಕಳ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವುದನ್ನು ಕಡ್ಡಾಯಗೊಳಿಸಿದೆ ಎಂದು ಹೇಳಿದರು.
ಅಷ್ಟೇ ಅಲ್ಲದೆ ಶಾಲೆಗೆ ಹೋಗುವ ಪ್ರತಿ ಮಗುವಿಗೆ 15 ಸಾವಿರ ರೂಪಾಯಿ ನೀಡಲಾಗುವುದು ಹಾಗೂ ಶಿಕ್ಷಣವನ್ನು ಉತ್ತೇಜಿಸುವ ಮತ್ತು ಕುಟುಂಬಗಳಿಗೆ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ಈ ಸಹಾಯವನ್ನು ನೀಡಲಾಗುತ್ತದೆ ಎಂದು ಸಿಎಂ ಚಂದ್ರಬಾಬು ನಾಯ್ಡು ತಿಳಿಸಿದರು.




