ಕಾರವಾರ: ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವುದೇ ಕ್ಷಣದಲ್ಲೂ ಪತನವಾಗಬಹುದು. ಬಿಜೆಪಿ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಇಲ್ಲಿನ ಪ್ರೀಮಿಯರ್ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಮೋದಿ ಸರ್ಕಾರಕ್ಕೆ 11 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆ ಕುರಿತು ಚರ್ಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಹಿಂದುತ್ವದ ಪರ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಕಿರುಕುಳ ನೀಡುವ ಕೆಲಸ ಕಾಂಗ್ರೆಸ್ ಸರ್ಕಾರದಿಂದ ನಡೆಯುತ್ತಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದರೆ, ಹಿಂದುತ್ವ ವಿಚಾರಧಾರ ಕುಗ್ಗಿಸಲು ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ’ ಎಂದು ಆರೋಪಿಸಿದರು.’
ಆಡಳಿತದಲ್ಲಿ ಸಮನ್ವಯತೆ ಇಲ್ಲ, ದುರಾಡಳಿತ ಉತ್ತುಂಗ ತಲುಪಿದ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ದುರಂತವೇ ಕಾರಣ, ಈ ದುರ್ಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟದ ಅಡ್ಡ ಪರಿಣಾಮ ಎಂಬುದು ಜನರಿಗೂ ಅರಿವಿಗೆ ಬರುತ್ತಿದೆ’ ಎಂದರು.
‘ಕೇಂದ್ರದ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಅಡ್ಡಿಪಡಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಮೊಬೈಲ್ ಟವರ್ ಸ್ಥಾಪನೆ, ನೌಕಾನೆಲೆ ಯೋಜನ ನಿರಾಶ್ರಿತರಿಗೆ ಹೆಚ್ಚುವರಿ ಪರಿಹಾರ
ವಿತರಣೆಗೆ ಅಡ್ಡಿಪಡಿಸುವ ಕೆಲಸ ನಿರಂತರವಾಗಿ ರಾಜ್ಯ ಸರ್ಕಾರದಿಂದ ಮುಂದುವರಿದಿದೆ’ ಎಂದು ದೂರಿದರು.




