ಸಿರುಗುಪ್ಪ : ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಬಿ.ಎಮ್.ನಾಗರಾಜ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರದಂದು ತ್ರೈಮಾಸಿಕ ಸಭೆ ನಡೆಯಿತು.
ಸಭೆಯಲ್ಲಿ ಸಾರ್ವಜನಿಕರಿಂದ ದೂರು ಹಾಗೂ ಸಮಸ್ಯೆಗಳ ಬಗ್ಗೆ ವಿವಿಧ ಇಲಾಖೆಗಳಿಗೆ ಸಂಬಂದಿಸಿದ ಅಧಿಕಾರಿಗಳೊಂದಿಗೆ ವಿವರಣೆ ಪಡೆದು ಸೂಚನೆಗಳನ್ನು ನೀಡಿದರು. ಆಯಾ ಇಲಾಖೆಗಳಿಗೆ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳನ್ನು ಜಾಗೃತಿ ಮೂಡಿಸುವಂತೆ ತಿಳಿಸಿದರು.
ತಹಶೀಲ್ದಾರ್ ಕೆ.ನರಸಪ್ಪ ಅವರು ಮಾತನಾಡಿ ಈಗಾಗಲೇ ತಾಲೂಕಿನಲ್ಲಿ ಮಳೆಯಿಂದಾಗಿ 13 ಮನೆಗಳು ಬಿದ್ದಿದ್ದು ಬಾಗಶ: ಹಾನಿಯಾದ್ದರಿಂದ ಸಂಬಂದಿಸಿದ ಫಲಾನುಭವಿಗಳಿಗೆ ತಲಾ ನಾಲ್ಕು ಸಾವಿರದಂತೆ ಒಟ್ಟು 52 ಸಾವಿರ ರೂಪಾಯಿಗಳನ್ನು ಪಾವತಿಸಲಾಗಿದೆ.

ರಾರಾವಿ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದು ಕುಟುಂಬದ ವಾರಸುದಾರರಿಗೆ ತಲಾ 5 ಲಕ್ಷದಂತೆ ಒಟ್ಟು 10ಲಕ್ಷ ಪರಿಹಾರದ ಹಣವನ್ನು ನೀಡಲಾಗಿದೆ. ತಾಲೂಕಿನಲ್ಲಿ ಪ್ರವಾಹಕ್ಕೆ ತುತ್ತಾಗುವ 16 ಗ್ರಾಮಗಳನ್ನು ಗುರುತಿಸಲಾಗಿದ್ದು, ಅಗತ್ಯ ಕ್ರಮವಹಿಸಲಾಗುವುದೆಂದು ವಿವರಿಸಿದರು.
ನಂತರ ಶಾಸಕರು ತಾಲೂಕಿನಲ್ಲಿ ಜೋಳ ಖರೀದಿ ಕೇಂದ್ರದಲ್ಲಿನ ಸಮಸ್ಯೆಗಳ ಇತ್ಯರ್ಥ, ಮೇವಿನ ಲಭ್ಯತೆ, ಪಶುಗಳಿಗೆ ಹರಡುವ ರೋಗಗಳ ನಿಯಂತ್ರಣ, ಮೇವಿನ ಬೀಜಗಳ ವಿತರಣೆ, ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ವಿವರಣೆ ಪಡೆದರು.
ಹಲವಾರು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ, ಕಟ್ಟಡದ ಸಮಸ್ಯೆ, ಶಿಥಿಲಗೊಂಡಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆ ಕಟ್ಟಡಕ್ಕೆ ನೂತನ ಕಟ್ಟಡ ನಿರ್ಮಾಣ, ಶಾಲಾ ಕೊಠಡಿಗಳ ನಿರ್ಮಾಣ.
ಸೂಕ್ತ ತಡೆಗೋಡೆ, ಬಾಡಿಗೆಯಲ್ಲಿ ನಡೆಯುತ್ತಿರುವ ಕೆಲವು ಕಛೇರಿಗಳು, ಅಂಗನವಾಡಿ ಕೇಂದ್ರಗಳಿಗೆ ಸೂಕ್ತ ಕಟ್ಟಡ, ಸೇರಿದಂತೆ ಇಲಾಖೆಗಳ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು.
ಎಲ್ಲಾ ಸಮಸ್ಯೆಗಳಿಗೆ ಆಯಾ ಇಲಾಖೆಗಳ ಸಮಸ್ಯೆಗಳ ಬಗ್ಗೆ ಸರ್ಕಾರ ಮಟ್ಟದಲ್ಲಿ ಪರಿಹರಿಸುವ ಭರವಸೆ ನೀಡಿದರು. ಅಲ್ಲದೇ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳು ಸಮನ್ವಯವಾಗಿ ಕಾರ್ಯ ನಿರ್ವಹಿಸಿ ರೈತರ ಹಿತ ಕಾಪಾಡಬೇಕು.
ಶಿಕ್ಷಣ, ಆರೋಗ್ಯ, ವಸತಿ ನಿಲಯಗಳಲ್ಲಿ ಸೂಕ್ತ ನಿಗಾವಹಿಸಿ, ಸರ್ಕಾರದ ಆದೇಶವನ್ನು ಪಾಲಿಸಬೇಕೆಂದರು.
ಇದೇ ವೇಳೆ ಪಂಚ ಗ್ಯಾರಂಟಿಗಳ ಅನುಷ್ಟಾನ ಸಮಿತಿಯ ಅಧ್ಯಕ್ಷ ಮಾರುತಿ ವರಪ್ರಸಾದ್‌ರೆಡ್ಡಿ ಹಾಗೂ ನಾಮನಿರ್ದೇಶಿತ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




