ಬೆಂಗಳೂರು : ಆರ್ ಸಿಬಿ ವಿಜಯೋತ್ಸವಕ್ಕೆ ಅನುಮತಿ ನೀಡಿದ ಪತ್ರವನ್ನು ಸಾರ್ವಜನಿಕರ ಮುಂದೆ ಬಹಿರಂಗವಾಗಿ ಬಿಡುಗಡೆ ಮಾಡಿ , ಹಾಗೂ ಡಿಪಿಎಆರ್ ಕಾರ್ಯದರ್ಶಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಸಸ್ಪೆಂಡ್ ಮಾಡಬೇಕು’ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಗ್ರಹಿಸಿದರು.

ಆರ್ ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಟಿ. ದಾಸರಹಳ್ಳಿಯ ಹಾವನೂರು ಬಡಾವಣೆ ನಿವಾಸಿ ಭೂಮಿಕ್ ಅವರ ಮನೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಕ್ಷೇತ್ರದ ಶಾಸಕ ಎಸ್. ಮುನಿರಾಜು,ಬೇಲೂರು ಶಾಸಕ ಸುರೇಶ್ ನೇತೃತ್ವದ ಬಿಜೆಪಿ ಟಿಮ್ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ನಂತರ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಮುನಿರಾಜು ಅವರ ಗ್ರಹ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ‘ಆರ್ ಸಿಬಿ ವಿಜಯೋತ್ಸವದ ವೇಳೆ ನಡೆದ ಸಾವು ನೋವುಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೇ ನನಗೆ ಗೊತ್ತೇ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ.ವಿಜಯೋತ್ಸವ ಕಾರ್ಯಕ್ರಮ ನಡೆಸಲು ಸಿಬ್ಬಂದಿ ಕೊರತೆ ಇದೆ ಎಂದು ಡಿಸಿಪಿ ಅವರು ತಿಳಿಸಿ ಫೈಲ್ ಮಾಡಿ ಡಿಪಿಎಆರ್ ಇಲಾಖೆಗೆ ಕಳುಹಿಸಿದ್ದಾರೆ.ಆದರೂ ಡಿಪಿಎಆರ್ ಕಾರ್ಯದರ್ಶಿ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ಕಳುಹಿಸಿದ್ದಾರೆ.ಅಲ್ಲಿಂದ ಫೈಲ್ ಮುಖ್ಯಮಂತ್ರಿ ಅವರಿಗೆ ಹೋಗಿದೆ.ಅವರೇ ಅನುಮತಿ ನೀಡಿದ್ದಾರೆ. ಆ ಫೈಲ್ ಮಾಯವಾಗಿದೆ.ಇದಕ್ಕೆ ಕಾರಣರಾದ ಡಿಪಿಎಆರ್ ಕಾರ್ಯದರ್ಶಿ ಮತ್ತು ಮುಖ್ಯಕಾರ್ಯದರ್ಶಿ ಅವರನ್ನು ಸಸ್ಪೆಂಡ್ ಮಾಡಬೇಕು’ಎಂದು ಆಗ್ರಹಿಸಿದರು.
ಅನುಮತಿ ಪತ್ರವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ ಆಗ ಇದಕ್ಕೆ ಕಾರಣವಾದ ನಿಜವಾದವರ ಬಣ್ಣ ಬಯಲಾಗುತ್ತದೆ ಎಂದ ಆರ್. ಅಶೋಕ್,ಕಾಂಗ್ರೆಸ್ ಹೈಕಮಾಂಡ್ ಗೆ ನಿಜವಾಗಲೂ ಶಕ್ತಿ ಇದ್ದರೆ ಪ್ರಕರಣಕ್ಕೆ ನೇರವಾಗಿ ಕಾರಣರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಶಿವಕುಮಾರ್ ಅವರ ತಲೆದಂಡ ಮಾಡಬೇಕು ಇಲ್ಲದಿದ್ದರೆ (ಖಾಲಿ) ಹೆಸರಿಗೆ ಮಾತ್ರ ಹೈಕಮಾಂಡ್ ಎಂದು ತಿಳಿಯಬೇಕಾಗುತ್ತದೆ.ಇಲ್ಲದಿದ್ದರೆ ರಾಜ್ಯದ ಜನತೆಯೇ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಖಾಲಿ ಮಾಡಿಸುತ್ತಾರೆ’ಎಂದು ಹೇಳಿದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ,’ಗೃಹ ಸಚಿವರನ್ನು ಲೆಕ್ಕಕ್ಕೆ ಇಡದೆ ಸಿಎಂ,ಡಿಸಿಎಂ ಅವರೇ ನಿರ್ಧಾರಗಳನ್ನು ಕೈಗೊಂಡರೆ ಗೃಹ ಮಂತ್ರಿ ಯಾಕಿರಬೇಕು? ಎಂದು ತರಾಟೆಗೆ ತೆಗೆದುಕೊಂಡರು.
‘ಇಡೀ ಕಾರ್ಯಕ್ರಮದಲ್ಲೊ ಯಾವುದೇ ಪ್ರೋಟೋಕಾಲ್ ಅನುಸರಿಸಿಲ್ಲ’ ಎಂದು ಕಿಡಿಕಾರಿದ ಛಲವಾದಿ ನಾರಾಯಣ ಸ್ವಾಮಿ,ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ರಾಜೀನಾಮೆ ನೀಡಲೇಬೇಕು’ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭಾರತ್ ಸೌಂದರ್ಯ, ಬಿ.ಎಂ ನಾರಾಯಣ, ವಿನೋದ್ ಗೌಡ ಸೇರಿದಂತೆ ಕ್ಷೇತ್ರದ ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಇದ್ದರು.
ವರದಿ : ಅಯ್ಯಣ್ಣ ಮಾಸ್ಟರ್




