Ad imageAd image

ನೆಹರು ವೃತ್ತದಲ್ಲಿ ಮಾರ್ಗಸೂಚಿ ನಾಮಫಲಕ ಅಳವಡಿಕೆ  ಲಯನ್ಸ್ ಕ್ಲಬ್ ಕಾರ್ಯಕ್ಕೆ ನಾಗರೀಕರಿಂದ ಮೆಚ್ಚುಗೆ

Bharath Vaibhav
ನೆಹರು ವೃತ್ತದಲ್ಲಿ ಮಾರ್ಗಸೂಚಿ ನಾಮಫಲಕ ಅಳವಡಿಕೆ  ಲಯನ್ಸ್ ಕ್ಲಬ್ ಕಾರ್ಯಕ್ಕೆ ನಾಗರೀಕರಿಂದ ಮೆಚ್ಚುಗೆ
WhatsApp Group Join Now
Telegram Group Join Now

ತುರುವೇಕೆರೆ: ಪಟ್ಟಣದ ಜನನಿಬಿಡ ಬಾಣಸಂದ್ರ, ಮಾಯಸಂದ್ರ ರಸ್ತೆಯ ನೆಹರು ವೃತ್ತದಲ್ಲಿ ಬೃಹತ್ ಮಾರ್ಗಸೂಚಿ ನಾಮಫಲಕ ಹಾಕುವ ಮೂಲಕ ಲಯನ್ಸ್ ಕ್ಲಬ್ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ದಿನಪ್ರತಿ ನೂರಾರು ವಾಹನಗಳು ಮೈಸೂರು, ಬೆಂಗಳೂರು, ಶಿವಮೊಗ್ಗ, ಬಳ್ಳಾರಿ, ಕಲಬುರ್ಗಿ, ಚಿತ್ರದುರ್ಗ, ಗಂಗಾವತಿ, ಮುಂಡರಗಿ ಸೇರಿದಂತೆ ವಿವಿಧೆಡೆಗಳಿಗೆ ತುರುವೇಕೆರೆ ಪಟ್ಟಣದ ಮೂಲಕವೇ ಹಾದುಹೋಗುತ್ತಿದ್ದವು. ಆದರೆ ತುರುವೇಕೆರೆ ಪಟ್ಟಣ ಪ್ರವೇಶವಾಗುತ್ತಿದ್ದಂತೆ ವಾಹನಗಳು ನೆಹರು (ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರು ಅವರ ಹೆಸರಿನ ವೃತ್ತ) ವೃತ್ತದಲ್ಲಿ ಯಾವ ರಸ್ತೆಯಲ್ಲಿ ಯಾವ ಊರಿಗೆ ತೆರಳಬೇಕೆನ್ನುವ ಮಾರ್ಗಸೂಚಿ ಇಲ್ಲದೆ ತಾವು ಹೋಗುವ ಮಾರ್ಗಬಿಟ್ಟು ಬೇರೆ ಮಾರ್ಗದಲ್ಲಿ ಕಿಲೋಮೀಟರ್ ದೂರ ಸಂಚರಿಸಿ ಅಪರಿಚಿತರಿಂದ ಸರಿಯಾದ ಮಾರ್ಗ ತಿಳಿದುಕೊಂಡು ತುರುವೇಕೆರೆಗೆ ವಾಪಸ್ ಬಂದು ಸರಿಯಾದ ಮಾರ್ಗದಲ್ಲಿ ತೆರಳುವ ಘಟನೆ ಸರ್ವೇಸಾಮಾನ್ಯವಾಗಿತ್ತು.

ಈ ಬಗ್ಗೆ ವಾಹನ ಸವಾರರು, ನಾಗರೀಕರು ಅನುಭವಿಸುತ್ತಿರುವ ಸಂಕಷ್ಟದ ಅರಿವಿದ್ದರೂ ಸಹ ಸ್ಥಳೀಯ ಪಟ್ಟಣ ಪಂಚಾಯ್ತಿಯಾಗಲೀ, ಲೋಕೋಪಯೋಗಿ ಇಲಾಖೆಯಾಗಲೀ, ತಾಲೂಕು ಆಡಳಿತವಾಗಲೀ ಅಥವಾ ರಸ್ತೆಗೆ ಸಂಬಂಧಿಸಿದ ಯಾವುದೇ ಪ್ರಾಧಿಕಾರವಾಗಲೀ ಮುಖ್ಯವಾದ ನೆಹರು ವೃತ್ತದಲ್ಲಿ ಮಾರ್ಗಸೂಚಿ ನಾಮಫಲಕ ಅಳವಡಿಸುವ ಗೋಜಿಗೇ ಹೋಗಿರಲಿಲ್ಲ.

ಶ್ರೀರಂಗಪಟ್ಟಣದಿಂದ ಬೀದರ್ ವರೆಗೆ ತುರುವೇಕೆರೆ ಮೂಲಕ ಹಾದುಹೋಗುವ ರಸ್ತೆಯು ರಾಷ್ಟ್ರೀಯ ಹೆದ್ದಾರಿ (೧೫೦ಎ)ಯಾಗಿದೆ. ಮೈಸೂರಿನಿಂದ ಬಳ್ಳಾರಿ, ಕಲಬುರ್ಗಿ, ಚಿತ್ರದುರ್ಗ, ಗಂಗಾವತಿ, ರಾಯಚೂರು, ಹೊಸಪೇಟೆ, ಮುಂಡರಗಿಗೆ ತೆರಳುವ ಹಾಗೂ ಅಲ್ಲಿಂದ ಮರಳಿ ಮೈಸೂರಿಗೆ ಹೋಗುವ ಸಾರಿಗೆ ಬಸ್ಸುಗಳು ತುರುವೇಕೆರೆ ಮೂಲಕವೇ ತೆರಳಬೇಕಿದೆ. ಇದಲ್ಲದೆ ಗುಲ್ಬರ್ಗಾ, ರಾಯಚೂರು ಭಾಗದಿಂದ ಸಾಕಷ್ಟು ಭಾರೀ ಸರಕುಸಾಗಾಣಿಕೆ ಲಾರಿಗಳು ಈ ಮಾರ್ಗದ ಮೂಲಕವೇ ಸಂಚರಿಸುತ್ತವೆ. ದಿನಪ್ರತಿ ನೂರಾರು ವಾಹನಗಳು ಸಂಚರಿಸಿದರೂ ಸಹ ಯಾವುದೇ ಇಲಾಖೆ, ಪ್ರಾಧಿಕಾರ ರಸ್ತೆ ಮಾರ್ಗಸೂಚಿಯನ್ನು ಬಾಣಸಂದ್ರ, ಮಾಯಸಂದ್ರ ರಸ್ತೆಯ ನೆಹರು ವೃತ್ತದಲ್ಲಿ ಹಾಕಬೇಕೆನ್ನುವ ಯೋಚನೆಯನ್ನೂ ಮಾಡಿರಲಿಲ್ಲ.

ವಾಹನ ಸವಾರರು, ಸಾರಿಗೆ ಬಸ್ಸು, ಲಾರಿ ಚಾಲಕರು ಪಡುತ್ತಿದ್ದ ಅವಸ್ಥೆಯನ್ನು ನೋಡಿ ಲಯನ್ಸ್ ಕ್ಲಬ್ ಈ ಹಿಂದೆ ಪಟ್ಟಣದ ಬಾಣಸಂದ್ರ, ಮಾಯಸಂದ್ರ ರಸ್ತೆಯ ನೆಹರು ವೃತ್ತದಲ್ಲಿ ಚಿಕ್ಕದಾದ ಮಾರ್ಗಸೂಚಿ ನಾಮಫಲಕವನ್ನು ಹಾಕಿತ್ತು. ಆದರೆ ತದನಂತರದಲ್ಲಿ ಈ ವೃತ್ತದ ಸಮೀಪದಲ್ಲೇ ಪಟ್ಟಣ ಪಂಚಾಯ್ತಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿ ಕೈಗೊಂಡಿದ್ದರಿಂದ ಆ ನಾಮಫಲಕ ಏನಾಯಿತೋ ದೇವರೇ ಬಲ್ಲ. ಈಗ ವಾಣಿಜ್ಯ ಸಂಕೀರ್ಣ ಕಾಮಗಾರಿ ಮುಗಿದಿದ್ದರೂ ಅದು ಲೋಕಾರ್ಪಣೆಗೊಳ್ಳುವ ಕಾಲ ಸನ್ನಿಹಿತವಾಗಿಲ್ಲ. ಯಥಾಪ್ರಕಾರ ರಸ್ತೆಯಲ್ಲಿ ಸಂಚರಿಸುವ ವಾಹನಸವಾರರು, ಸಾರಿಗೆ ಬಸ್ಸು, ಲಾರಿ ಚಾಲಕರು, ನಾಗರೀಕರ ರಸ್ತೆಯ ದಿಕ್ಕುತಪ್ಪುತ್ತಿದ್ದರು. ಇದನ್ನು ಕಂಡು ಬೃಹತ್ ಮಾರ್ಗಸೂಚಿ ನಾಮಫಲಕ ಹಾಕುವ ನಿರ್ಧಾರವನ್ನು ಲಯನ್ಸ್ ಕ್ಲಬ್ ಮಾಡಿ ಬಾಣಸಂದ್ರ, ಮಾಯಸಂದ್ರ ವೃತ್ತದಲ್ಲಿ ಬೃಹದಾಕಾರವಾದ ಮಾರ್ಗಸೂಚಿ ನಾಮಫಲಕವನ್ನು ಸ್ಥಾಪಿಸಿದೆ.

ಲಯನ್ಸ್ ಕ್ಲಬ್ ನೆಹರು ವೃತ್ತದಲ್ಲಿ ಸ್ಥಾಪಿಸಿರುವ ಬೃಹತ್ ಮಾರ್ಗಸೂಚಿ ನಾಮಫಲಕ ಜೂನ್ ೧೪ರಂದು ಲೋಕಾರ್ಪಣೆಗೊಳ್ಳಿದ್ದು, ಲಯನ್ಸ್ ಕ್ಲಬ್ ಅಧ್ಯಕ್ಷ ರಂಗನಾಥ್ ಹಾಗೂ ಪದಾಧಿಕಾರಿಗಳ ಸಾಮಾಜಿಕ ಕಾರ್ಯಕ್ಕೆ ನಾಗರೀಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!