ಹೈದರಾಬಾದ್: ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಹೈದರಾಬಾದ್ ನ ಪಬ್ ನಲ್ಲಿ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟಿ ಕಲ್ಪಿಕಾ ಗಣೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.
ಹೈದರಾಬಾದ್ನ ಗಚ್ಚಿಬೌಲಿಯಲ್ಲಿರುವ ಪ್ರಿಸಂ ಪಬ್ನಲ್ಲಿ ಈ ಘಟನೆ ನಡೆದಿದ್ದು, ಕೇಕ್ಗಾಗಿ ಆರಂಭವಾದ ಸಣ್ಣ ಜಗಳ ಉಲ್ಬಣಗೊಂಡು ಅಂತಿಮವಾಗಿ ಪೊಲೀಸ್ ಪ್ರಕರಣಕ್ಕೆ ಕಾರಣವಾಗಿದೆ. ನಟಿ ಕಲ್ಪಿಕಾ ಕಳೆದ ಮೇ 29 ರಂದು ಪ್ರಿಸಂ ಪಬ್ಗೆ ಹೋಗಿದ್ದರು. ಅಲ್ಲಿ ಅವರು 2200 ರೂ. ಶುಲ್ಕ ಪಾವತಿಸಿ ಉಚಿತ ಕೇಕ್ ಕೇಳಿದ್ದರು. ಮ್ಯಾನೇಜರ್ ಅವರಿಗೆ ಅದನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಈ ವೇಳೆ ಕಲ್ಪಿಕಾ ಗಣೇಶ್ ಮತ್ತು ಪಬ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ.

ಆ ಸಮಯದಲ್ಲಿ, ಪಬ್ ಆಡಳಿತ ಮಂಡಳಿಯು ನಟಿ ಕಲ್ಪಿಕಾ ತಮ್ಮ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿತು. ಗಲಾಟೆ ವೇಳೆ ಕಲ್ಪಿಕಾ ಅವರು ತಟ್ಟೆಗಳನ್ನು ಎಸೆದಿದ್ದಾರೆ.
ಸಿಬ್ಬಂದಿಯನ್ನು ಅವಮಾನಿಸಿದ್ದಾರೆ ಮತ್ತು ಅವರನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಕಲ್ಪಿಕಾ ವಿರುದ್ಧ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಘಟನೆಯ ತನಿಖೆ ನಡೆಸುತ್ತಿದ್ದಾರೆ.




