ರಾಯಚೂರು : ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆ ಬಹುತೇಕ ಜಲಾಶಯಗಳಿಗೆ ಒಳಹರಿವು ಹೆಚ್ಚಳವಾಗಿದೆ. ರಾಯಚೂರಿನಲ್ಲೂ ವರುಣನ ಆರ್ಭಟ ಜೋರಾಗಿದ್ದು ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ.
ಹೀಗಾಗಿ ಜಲಾಶಯದಿಂದ ಹೊರಹರಿವು ಕೂಡ ಹೆಚ್ಚಾಗಿದ್ದು ಕೃಷ್ಣಾ ನದಿಗೆ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ.
ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಕಾರಣ ಪ್ರವಾಹದ ಭೀತಿ ಎದುರಾಗಿದೆ. ಹೀಗಾಗಿ ನದಿ ಪಾತ್ರದ ಜನರಿಗೆ ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.
ಈ ಭಾಗದಲ್ಲಿ ವಾಸಿಸುವ ಯಾರೊಬ್ಬರೂ ನದಿ ಪಾತ್ರಕ್ಕೆ ತೆರಳದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.
ನಾರಾಯಣಪುರ ಜಲಾಶಯದಿಂದ 29,226 ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ. ಇನ್ನು ಜಲಾಶಯಕ್ಕೆ 30,000 ಕ್ಯೂಸೆಕ್ ಒಳಹರಿವು ಇದ್ದು, 85.41% ರಷ್ಟು ಭರ್ತಿಯಾಗಿದೆ.



