ತುರುವೇಕೆರೆ : ತಾಲೂಕಿನ ಕುಣಿಕೇನಹಳ್ಳಿ ಗ್ರಾಮದಲ್ಲಿ ದಲಿತರಿಗೆ ರಕ್ಷಣೆಯಿಲ್ಲದಂತಾಗಿದೆ. ಗ್ರಾಮದಲ್ಲಿ ಅಶಾಂತಿ ಮನೆಮಾಡಿದ್ದು, ಸಾಮಾಜಿಕ ನ್ಯಾಯ ಎಂಬುದು ಮರೀಚಿಕೆಯಾಗಿದೆ. ಗ್ರಾಮವು ಒಕ್ಕಲಿಗರ ಕಪಿಮುಷ್ಠಿಯಲ್ಲಿ ಸಿಲುಕಿದ್ದು, ರಿಪಬ್ಲಿಕ್ ಆಫ್ ಕುಣಿಕೇನಹಳ್ಳಿಯಾಗಿ ಪ್ರತ್ಯೇಕ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ ಎಂದು ಛಲವಾದಿ ಮಹಾಸಭಾದ ಕಾರ್ಯದರ್ಶಿ ಜಗದೀಶ್ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ನೆರವಿನಿಂದ ಕುಣಿಕೇನಹಳ್ಳಿ ಗ್ರಾಮದ ಕೆಂಪಮ್ಮ ದೇವಿ ದೇವಸ್ಥಾನಕ್ಕೆ ದಲಿತರಾದ ನಾವು ಪ್ರವೇಶ ಮಾಡಿದ್ದೆವು. ಅಂದಿನಿಂದ ಗ್ರಾಮದಲ್ಲಿನ ಸವರ್ಣೀಯರಿಗೆ ಅಸಹನೆ ಕುದಿಯುತ್ತಿದೆ. ದೇವಸ್ಥಾನದ ಕಾರ್ಯಕ್ರಮ, ಜಾತ್ರಾ ಮಹೋತ್ಸವದಿಂದ ನಮ್ಮನ್ನು (ದಲಿತರನ್ನು) ದೂರವಿಡುವ, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದ ಮೂಲಕ ಸವರ್ಣೀಯರು ನಮ್ಮ ಮೇಲೆ ಹಗೆ, ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆಂದು ದೂರಿದರು.
ಗ್ರಾಮದಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸುವ ಸಲುವಾಗಿ ಜಿಲ್ಲಾಡಳಿತ, ತಾಲೂಕು ಆಡಳಿತ, ಉಪವಿಭಾಗಾಧಿಕಾರಿ, ಎಎಸ್ಪಿ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಗಿತ್ತು. ಶ್ರೀ ಕೆಂಪಮ್ಮದೇವಿ ಜಾತ್ರೆ ನಡೆಸಲು ಸಮಿತಿ ರಚಿಸಿ, ಸಮಿತಿಯಲ್ಲಿ ಆರು ಜನ ದಲಿತರಿಗೆ ಅವಕಾಶ ಕಲ್ಪಿಸಿದ್ದರು. ಆದರೆ ಸವರ್ಣೀಯರು ನಮ್ಮೊಂದಿಗೆ ಜಾತ್ರೆ ನಡೆಸಲು ಸಿದ್ದರಿಲ್ಲದ ಕಾರಣ ಜಾತ್ರೆ ಈವರೆಗೆ ನಡೆದಿಲ್ಲ. ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಂಧಾನ ಸಭೆ ವಿಫಲವಾಗಿರುವ ಕಾರಣ ಗ್ರಾಮದೇವತೆ ಕೆಂಪಮ್ಮದೇವಿ, ಚಿಕ್ಕಮ್ಮದೇವಿ, ಕಂಚೀರಾಯಸ್ವಾಮಿ ದೇವಸ್ಥಾನ ಹಾಗೂ ಉತ್ಸವ ಮೂರ್ತಿ ದೇವರನ್ನು ಸರ್ಕಾರದ ವಶಕ್ಕೆ ಪಡೆದುಕೊಂಡು ಗ್ರಾಮದಲ್ಲಿ ಶಾಂತಿ ಕಾಪಾಡಿ, ಸಾಮಾಜಿಕ ನ್ಯಾಯ ದೊರೆಯುವಂತೆ ಮಾಡಬೇಕೆಂದು ಆಗ್ರಹಿಸಿದರು.
ಗ್ರಾಮದಲ್ಲಿ ದಲಿತರ ಮೇಲೆ ಅಸ್ಪೃಶ್ಯತೆ ಆಚರಣೆ ಮಾಡಿ, ಸಾಮಾಜಿಕ ಬಹಿಷ್ಕಾರ ಹಾಕಿರುವುದಲ್ಲದೆ, ದಲಿತರು ದೇವಸ್ಥಾನ ಪ್ರವೇಶಿಸುವ ಹೋರಾಟದ ಮುಂದಾಳತ್ವ ವಹಿಸಿದ್ದ ದಲಿತ ನಾಯಕರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಲು ಮುಂದಾಗಿದ್ದ ಗ್ರಾಮದ ಕೆಲವು ವ್ಯಕ್ತಿಗಳ ಮೇಲೆ ಈಗಾಗಲೇ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೆ ಪೊಲೀಸರು ಕೇಸು ದಾಖಲಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಕೂಡಲೇ ಪೋಲೀಸರು ಅವರ ಮೇಲೆ ಅಟ್ರಾಸಿಟಿ ಕೇಸು ದಾಖಲಿಸಿ ಎಫ್.ಐ.ಆರ್. ಹಾಕಬೇಕು. ಇಲ್ಲವಾದಲ್ಲಿ ಛಲವಾದಿ ಮಹಾಸಭಾ ಹಾಗೂ ದಲಿತ ಬಾಂದವರು ಕುಣಿಕೇನಹಳ್ಳಿ ಗ್ರಾಮದಿಂದ ತಾಲ್ಲೂಕು ಕಛೇರಿವರೆಗೆ ಪಾದಯಾತ್ರೆ ನಡೆಸಿ ತಾಲ್ಲೂಕು ಕಛೇರಿಗೆ ಮುತ್ತಿಗೆ ಹಾಕಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಗೋಷ್ಟಿಯಲ್ಲಿ ಛಲವಾದಿ ಮಹಾಸಭಾದ ಅಧ್ಯಕ್ಷ ಹಿರೇಡೊಂಕೀಹಳ್ಳಿ ರಾಮಣ್ಣ, ಗೌರವಾಧ್ಯಕ್ಷ ಮಹೇಶ್, ಉಪಾಧ್ಯಕ್ಷ ಮಹದೇವಯ್ಯ, ಕಾರ್ಯಾಧ್ಯಕ್ಷ ಸೋಮಶೇಖರಯ್ಯ, ಪದಾಧಿಕಾರಿಗಳಾದ ತಿಮ್ಮಯ್ಯ, ಲೋಕೇಶ್, ಪ್ರಸನ್ನಕುಮಾರ್, ರಾಜು, ಕೃಷ್ಣಮೂರ್ತಿ, ದೇವರಾಜ್, ದಾಸಪ್ಪ, ಶಂಕರಯ್ಯ, ಮೂಡ್ಲಯ್ಯ, ತಿಮ್ಮಯ್ಯ, ಬಸವರಾಜ್ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್




