ಬೆಳಗಾವಿ: ಬಸ್ ಒಂದರಲ್ಲಿ ಕಿಟಕಿ ಬದಿಯ ಸೀಟ್ಗಾಗಿ ಯುವಕರ ನಡುವೆ ಗಲಾಟೆ ಪ್ರಾರಂಭವಾಗಿ ಅಪರಿಚಿತ ಯುವಕ ವಿದ್ಯಾರ್ಥಿಯ ಮೇಲೆ ಚಾಕುವಿನಿಂದ ಇರಿದು ಪರಾರಿಯಾಗಿರುವಂತಹ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ನಗರದ ಬಸ್ ನಿಲ್ದಾಣದಲ್ಲಿ ಪಂತಬಾಳೇಕುಂದ್ರಿ-ಸಿಬಿಟಿ ಮಾರ್ಗದ ಬಸ್ನಲ್ಲಿ ಈ ಘಟನೆ ನಡೆದಿದೆ.ಘಟನೆಯಲ್ಲಿ ಮಾಜ್ ರಶೀದ್ ಸನದಿ (19) ಎಂಬ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿ ನಗರಕ್ಕೆ ಬರುತ್ತಿದ್ದ ಬಸ್ನಲ್ಲಿ ಕಿಟಕಿ ಬಳಿಯ ಸೀಟ್ ವಿಚಾರವಾಗಿ ಮಾಜ್ ಹಾಗೂ ಕೆಲವು ಅಪರಿಚಿತ ಯುವಕರ ನಡುವೆ ಗಲಾಟೆ ಪ್ರಾರಂಭವಾಗಿದೆ. ಜಗಳ ವಿಕೋಪಕ್ಕೆ ಹೋಗಿ ಯುವಕರ ಗುಂಪಿನಲ್ಲಿದ್ದ ಒಬ್ಬ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಇದೀಗ ನಗರದ ಪೊಲೀಸ್ ಉಪ ಆಯುಕ್ತ ರೋಹನ್ ಜಗದೀಶ್ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿ ಆರೋಪಿಗಳ ಪತ್ತೆಗೆ ಕ್ರಮ ವಹಿಸಿದ್ದಾಗಿ ತಿಳಿಸಿದ್ದಾರೆ.




