Ad imageAd image

ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಜನಪದ ಸಾಹಿತ್ಯ ಅತ್ಯವಶ್ಯಕ : ಡಾ.ಸಣ್ಣಹೊನ್ನಯ್ಯ ಕಂಟಲಗೆರೆ

Bharath Vaibhav
ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಜನಪದ ಸಾಹಿತ್ಯ ಅತ್ಯವಶ್ಯಕ : ಡಾ.ಸಣ್ಣಹೊನ್ನಯ್ಯ ಕಂಟಲಗೆರೆ
WhatsApp Group Join Now
Telegram Group Join Now

ತುರುವೇಕೆರೆ : ವಿದ್ಯಾರ್ಥಿಗಳಿಗೆ ನಾಡಿನ ಭವ್ಯ ಸಂಸ್ಕೃತಿ, ಮೌಲ್ಯಗಳು ಮತ್ತು ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಜನಪದ ಸಾಹಿತ್ಯ ಅತ್ಯವಶ್ಯಕ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ, ಜಾನಪದ ಕಲಾವಿದ ಡಾ.ಕೆ.ಸಣ್ಣಹೊನ್ನಯ್ಯ ಕಂಟಲಗೆರೆ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಸಾಪ ನಗರ ಘಟಕ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪರಿಷತ್ತಿನ ನಡೆ ಶಾಲಾ ಕಾಲೇಜಿನ ಕಡೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಜೀವನದಲ್ಲಿ ಜನಪದ ಸಾಹಿತ್ಯದ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ಜಾನಪದ ಸಾಹಿತ್ಯದಲ್ಲಿ ಮನುಷ್ಯದ ಬದುಕಿನ ಪಾಠ ಅಡಗಿದೆ. ಗ್ರಾಮೀಣ ಪ್ರದೇಶದ ಜನರು ಮತ್ತು ತಾಯಂದಿರು ಮನರಂಜನೆಗಾಗಿ ಕೃಷಿ ಚಟುವಟಿಕೆ, ಮನೆ ಕೆಲಸದ ನಡುವೆ ಗುನುಗಿದ ಗೀತೆಗಳು, ಲಾವಣಿಗಳು, ಜೋಗುಳದ ಹಾಡುಗಳು ಜನಪದ ಗೀತೆಗಳಾಗಿ ನಮ್ಮ ಬದುಕನ್ನು ಬದುಕಿನ ಅರ್ಥವನ್ನು ವರ್ಣಿಸುವ ಸಾಹಿತ್ಯವಾಗಿ ಇಂದು ಜಾನಪದ ಸಾಹಿತ್ಯ ಲೋಕವನ್ನು ಪ್ರಕಾಶಿಸಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೆ ಪ್ರತಿಯೊಬ್ಬರ ವ್ಯಕ್ತಿತ್ವ ವಿಕಸನಕ್ಕೆ ಜಾನಪದ ಸಾಹಿತ್ಯದ ಮೌಲ್ಯಗಳು ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಪಿ.ರಾಜು, ಮುಂದಿನ ಪೀಳಿಗೆಗೆ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಯುವಜನರ ಪಾತ್ರದ ಅಗತ್ಯತೆಯನ್ನು ಹಾಗೂ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸುವ ಸಲುವಾಗಿ ಕಸಾಪ ನಡೆ ಶಾಲಾ ಕಾಲೇಜುಗಳ ಕಡೆ ಎಂಬ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನದ್ದಾಗಿದೆ. ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ತಮ್ಮ ಮಾತೃಭಾಷೆ ಕನ್ನಡವನ್ನು, ಕನ್ನಡ ನಾಡು, ನುಡಿ, ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸಲು ಕಂಕಣಬದ್ಧರಾಗಬೇಕಿದೆ ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಅನಂತರಾಮು ಅಧ್ಯಕ್ಷತೆ ವಹಿಸಿದ್ದರು. ಕಸಾಪ ವತಿಯಿಂದ ಜಾನಪದ ಕಲಾವಿದ ಡಾ.ಸಣ್ಣಹೊನ್ನಯ್ಯ ಕಂಟಲಗೆರೆ ಅವರನ್ನು ಸನ್ಮಾನಿಸಲಾಯಿತು. ಕಸಾಪ ನಗರ ಘಟಕದ ಅಧ್ಯಕ್ಷ ವಿ.ಎನ್.ನಂಜೇಗೌಡ, ಕಾರ್ಯದರ್ಶಿ ಗಿರೀಶ್ ಕೆ. ಭಟ್, ಉಪಪ್ರಾಂಶುಪಾಲ ವೆಂಕಟೇಶ್, ಕಸಾಪ ತಾಲೂಕು ಕಾರ್ಯದರ್ಶಿ ದಿನೇಶ್ ಸೇರಿದಂತೆ ಕಾಲೇಜು ಮತ್ತು ಪ್ರೌಢಶಾಲೆಯ ಬೋಧಕ, ಬೋಧಕೇತರ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ : ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!