ಯಾದಗಿರಿ: ನಮ್ಮ ಜೀವನದಲ್ಲಿ ನಾವು ಮಾಡಿದ ಪ್ಲ್ಯಾನ್ ಕೆಲವೊಮ್ಮೆ ವರ್ಕ್ ಆಗುವುದಿಲ್ಲ. ಅದಕ್ಕೆ ಉತ್ತಮವಾದ ಉದಾಹರಣೆ, ಯಾದಗಿರಿಯ ಈ ಕುಟುಂಬ. ಸುಮಾರು ವರ್ಷಗಳ ಹಿಂದೆ ಹಿಂದ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ ಕುಟುಂಬವೊಂದು ಹಿಂದೂ ಧರ್ಮಕ್ಕೆ ಘರ್ ವಾಪ್ಸಿ ಆಗಿದ್ದು, ಅದಕ್ಕೆ ಕಾರಣವಾಗಿದ್ದು ಆ ಒಂದು ಘಟನೆ.
ಯಾದಗಿರಿ ನಗರದ ಗಿರಿನಗರ ಕಾಲೋನಿಯಲ್ಲಿರುವ ಬುಡ್ಡ ಜಂಗಮ ಸಮಾಜದ ವೆಂಕಟೇಶ್ ಹಾಗೂ ಅವರ ಕುಟುಂಬ ಕಾರಣಾಂತರಗಳಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿತ್ತು. ಆದರೆ ಈಗ ಮರಳಿ ಹಿಂದೂ ಧರ್ಮಕ್ಕೆ ಬಂದಿದ್ದು, ಅದಕ್ಕೆ ಕಾರಣ ಆಂಜನೇಯ.
ಕನಸಿನಲ್ಲಿ ಆಂಜನೇಯ ಬಂದು ಹಿಂದೂ ಧರ್ಮಕ್ಕೆ ಮರಳಿ ಬರುವಂತೆ ಹೇಳಿದ್ದಕ್ಕೆ ಮರಳಿ ಬಂದಿದ್ದೇವೆ ಎಂದು ವೆಂಕಟೇಶ್ ಹೇಳಿದ್ದು, ಅದೇ ಊರಿನ ಸ್ವಾಮೀಜಿ ಒಬ್ಬರು ದಂಪತಿ ಹಾಗೂ ಮಕ್ಕಳ ಹಣೆಗೆ ವಿಭೂತಿ ಹಚ್ಚಿ ಕೊರಳಿಗೆ ರುದ್ರಾಕ್ಷಿ ಧಾರಣೆ ಮಾಡಿ ಧರ್ಮಕ್ಕೆ ಕರೆಸಿಕೊಂಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಈ ವೆಂಕಟೇಶ್‌ಗೆ ಬಹಳ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಇದೆ ಕಾರಣಕ್ಕೆ ಪರಿಚಯಸ್ಥರ ಮೂಲಕ ಆಂಧ್ರದ ಅನಂತಪುರದ ಗುತ್ತಿ ಚರ್ಚಿಗೆ ಹೋಗಿದ್ದರಂತೆ. ಅದರ ನಂತರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ.
ಹಾಗಾಗಿ ಯೇಸು ಸ್ವಾಮಿಯಿಂದ ಆರೋಗ್ಯ ಸುಧಾರಿಸಿದೆ ಎಂದು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರು. ಕಳೆದ ಒಂದು ವರ್ಷದಿಂದ ಯಾಕೋ ಮನಸ್ಸಿನಲ್ಲಿ ತಳಮಳವಾಗುತ್ತಿತ್ತಂತೆ.
ಅದಕ್ಕೆ ಸರಿಯಾಗಿ ನಿತ್ಯ ಆಂಜನೇಯ ಕನಸಿನಲ್ಲಿ ಬರುತತಿದ್ದನಂತೆ. ಅಲ್ಲದೇ, ಆರ್ಥಿಕ ಸಮಸ್ಯೆಗಳು ಜಾಸ್ತಿ ಆಗಿದ್ದವು. ಇದನ್ನಲ್ಲಾ ನೋಡಿ ಮತ್ತೆ ಹಿಂದೂ ಧರ್ಮಕ್ಕೆ ಮರಳಿ ಬಂದಿದ್ಧಾರೆ.




