ತುರುವೇಕೆರೆ: ತಾಲ್ಲೂಕಿನ ಅಂಚಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಯೋಗ ದಿನಾಚರಣೆಯ ಬಗ್ಗೆ ಮಾತನಾಡಿದ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಎಂ.ಬಿ.ಲೋಕೇಶ್, ಪ್ರಸ್ತುತ ಪ್ರತಿಯೊಬ್ಬ ವ್ಯಕ್ತಿಯೂ ಒತ್ತಡದ ಬದುಕನ್ನು ಸಾಗಿಸುತ್ತಿದ್ದಾರೆ. ಒತ್ತಡದ ಬದುಕಿನ ನಡುವೆ ದೈಹಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಿಲ್ಲ. ಆದಕಾರಣ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ. ಒತ್ತಡದ ಬದುಕನ್ನು ಹಗುರವಾಗಿಸಿ ದೈಹಿಕವಾಗಿ ಆರೋಗ್ಯವಂತರನ್ನಾಗಿ ಮಾಡಲು ಯೋಗ ಅತ್ಯುತ್ತಮ ಚಿಕಿತ್ಸಾ ಪದ್ಧತಿಯಾಗಿದೆ ಎಂದರು.

ವಿದ್ಯಾರ್ಥಿಗಳಲ್ಲಿ ದೈಹಿಕ ಕ್ಷಮತೆ ಹೆಚ್ಚಿಸಲು, ಬೌದ್ದಿಕ ಮಟ್ಟವನ್ನು ಸುಧಾರಿಸಲು ಯೋಗ ಬಹಳ ಪ್ರಯೋಜಕಾರಿಯಾಗಿದೆ. ಜ್ಞಾನಾರ್ಜನೆಗೆ ಏಕಾಗ್ರತೆ ಬಹಳ ಮುಖ್ಯವಾಗಿದ್ದು, ಯೋಗದಿಂದ ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸಲು, ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ವಿವಿಧ ಕ್ರೀಡೆಗಳಲ್ಲಿ ತೊಡಗುವುದರಿಂದ ದೈಹಿಕವಾಗಿ ಸದೃಢರಾಗಬಹುದಾಗಿದೆ ಆದರೆ ಮಾನಸಿಕವಾಗಿ ಸದೃಢರಾಗಲು ಯೋಗ ಅತ್ಯವಶ್ಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ದೈಹಿಕ ಶಿಕ್ಷಕಿ ಸುಧಾಮಣಿ ಶಿಕ್ಷಕ ವರ್ಗಕ್ಕೆ, ವಿದ್ಯಾರ್ಥಿಗಳಿಗೆ ಯೋಗ ಹೇಳಿಕೊಟ್ಟರು. ಶಾಲೆಯ ಮುಖ್ಯ ಶಿಕ್ಷಕ ಕುಮಾರಪ್ಪ, ಶಿಕ್ಷಕರಾದ ಗೋಪಾಲನಾಯಕ್, ರೂಪಶ್ರೀ, ಸುಮಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




