————————————–ಮಹಾರಾಷ್ಟ್ರ ಸಕ್ಕರೆ ಉದ್ಯಮದೊಂದಿಗೆ ಸ್ಪರ್ಧೆ
——————————————-ಕಬ್ಬು ಅಭಿವೃದ್ಧಿ, ಸಕ್ಕರೆ ಸಚಿವರ ಆಶಯ
ಬೆಳಗಾವಿ : ಮಹಾರಾಷ್ಟ್ರ ಸಕ್ಕರೆ ಉದ್ಯಮಕ್ಕೆ ಸ್ಪರ್ಧೆ ನೀಡುವುದು ಸರ್ಕಾರದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳು ಅಗತ್ಯ ಸಹಾಯ, ಸಹಕಾರ ನೀಡಲಾಗುವುದೆಂದು ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವರು ಶಿವಾನಂದ ಪಾಟೀಲ ಹೇಳಿದರು.
ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ಸಕ್ಕರೆ ಕಾರ್ಖಾನೆಗಳಿಗೆ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಸಚಿವರು, ಸಕ್ಕರೆ ಕಾರ್ಖಾನೆಗಳು ತಮ್ಮ ಪ್ರಗತಿಯೊಂದಿಗೆ ರೈತರ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಸಕ್ಕರೆ ಕಾರ್ಖಾನೆಗಳಿಗೆ ಸ್ವಯಂ ನಿಯಂತ್ರಣ ಅಗತ್ಯ. ಕಾರ್ಖಾನೆಗಳ ನಡುವೆ ಆರೋಗ್ಯಕರ ಸ್ಪರ್ಧೆ ಒಳ್ಳೆಯದು. ಆದರೆ, ಸ್ವಾರ್ಥ ಸಾಧನೆಯ ಕಾರ್ಯಕ್ಷೇತ್ರವನ್ನು ಮೀರಿ ಹೋಗಬಾರದು. ಸರ್ಕಾರ ಈ ವಿಚಾರದಲ್ಲಿ ನಿಯಂತ್ರಿಸಲು ಶಾಸನ ರೂಪಿಸುವ ಪರಿಸ್ಥಿತಿ ನಿರ್ಮಾಣ ಆಗಬಾರದು ಎಂದರು.
ಸಕ್ಕರೆ ಕಾರ್ಖಾನೆಗಳ ಪ್ರಗತಿಯಲ್ಲಿ ರಾಜ್ಯ ಸರ್ಕಾರದ ಕೊಡುಗೆ ಗಣನೀಯವಾಗಿದೆ. ಸರ್ಕಾರ ರೈತರಿಗೆ ನೀರು, ವಿದ್ಯುತ್, ಕಬ್ಬಿನ ಬೀಜ ಸೇರಿದಂತೆ ಹಲವು ಸವಲತ್ತುಗಳನ್ನು ಒದಗಿಸದಿದ್ದರೆ ಕಾರ್ಖಾನೆಗಳು ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಈ ಅಂಶಗಳು ಅವರ ಗಮನದಲ್ಲಿರಬೇಕು.
ಈಚಿನ ದಿನಗಳಲ್ಲಿ ಗುತ್ತಿಗೆ ಕೃಷಿ ಪದ್ಧತಿ ಬರುತ್ತಿದ್ದು, ಇದರಿಂದ ಭೂಮಿಯ ಫಲವತ್ತತೆ ನಾಶವಾಗುವ ಅಪಾಯವಿದೆ. ಕಾರ್ಖಾನೆಗಳು ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ರೈತರ ಭೂಮಿಯ ನಿರ್ವಹಣೆಯ ಜವಾಬ್ದಾರಿ ಕೂಡಾ ಕಾರ್ಖಾನೆಗಳ ಮೇಲೆ ಇದೆ ಎಂದರು.
ಕೇಂದ್ರ ಸರ್ಕಾರ ಎಥನಾಲ್ ಸೇರಿದಂತೆ ಹಲವು ಹೊಸ ಹೊಸ ಯೋಜನೆಗಳನ್ನು ಘೋಷಿಸಿದೆ. ರಾಜ್ಯ ಸರ್ಕಾರ ಕೂಡಾ ಅಗತ್ಯ ಸಹಕಾರ ನೀಡುತ್ತಿದೆ. ಈ ಸೌಲಭ್ಯಗಳನ್ನು ಬಳಸಿಕೊಂಡು ರಾಜ್ಯದ ಸಕ್ಕರೆ ಕಾರ್ಖಾನೆಗಳು ಇತರ ರಾಜ್ಯಗಳಿಗೂ ಮಾದರಿಯಾಗಲಿ ಎಂದರು.
ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ರಾಜಗೋಪಾಲ, ಮಲಗೌಂಡ ಪಾಟೀಲ, ಅಭಿನಂದನ ಪಾಟೀಲ, ಅಭಯ ಸರನಾಯಕ, ವಿ. ಜೆ. ರವಿ ಇದ್ದರು.
20 ಕೋಟಿ ರೂ. ವೆಚ್ಚದಲ್ಲಿ ಕಾಲೇಜು :ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ಮದ್ಯಸಾರ ತಂತ್ರಜ್ಞಾನ ಮತ್ತು ಸಕ್ಕರೆ ತಂತ್ರಜ್ಞಾನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸಗಳನ್ನು ಆರಂಭಿಸಲಾಗುತ್ತಿದ್ದು. 20 ಕೋಟಿ ರೂ. ವೆಚ್ಚದಲ್ಲಿ ಕಾಲೇಜು ಕಟ್ಟಡ ನಿರ್ಮಿಸಲಾಗುವುದೆಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಸಕ್ಕರೆ ಉದ್ಯಮದ ಬೆಳವಣಿಗೆ ದೃಷ್ಟಿಯಿಂದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಸ್ಥಾಪಿಸಲಾಗಿದ್ದು, ಸಕ್ಕರೆ ಉದ್ಯಮಕ್ಕೆ ಅಗತ್ಯ ಸಹಾಯ, ಸಹಕಾರ ನೀಡಲಾಗುತ್ತಿದೆ. ಕಬ್ಬು ಬೆಳೆಗಾರರಿಗೂ ಸಂಸ್ಥೆಯಿಂದ ಹೊಸ ತಳಿ ಸೇರಿದಂತೆ ಹಲವು ನೆರವು ನೀಡಲಾಗುತ್ತಿದೆ ಎಂದರು.
ಎರಡು ವರ್ಷಗಳಿಂದ ರಾಜ್ಯದಲ್ಲಿ ಸುಮಾರು 6 ಲಕ್ಷ ಹೆಕ್ಟೇರ ಕ್ಷೇತ್ರದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಉತ್ತಮ ಮಳೆ ಆಗುತ್ತಿರುವುದರಿಂದ ಇನ್ನೂ 1 ಲಕ್ಷ ಹೆಕ್ಟೇರ ಕ್ಷೇತ್ರ ಹೆಚ್ಚಾಗುವ ನಿರೀಕ್ಷೆ ಇದೆ. ಕಬ್ಬಿನ ಕೊರತೆ ಎದುರುಸುತ್ತಿರುವ ಕಾರ್ಖಾನೆಗಳಿಗೆ ಇನ್ನು ಮುಂದೆ ಕಬ್ಬಿನ ಸಮಸ್ಯೆಯಾಗದು.
ಸಕ್ಕರೆ ಕಾರ್ಖಾನೆಗಳು ಸ್ವಯಂ ನಿಯಂತ್ರಣ ಹಾಕಿಕೊಳ್ಳುವುದು ಅಷ್ಟೇ ಅಲ್ಲದೆ ಸಾಮಾಜಿಕ ಬದ್ಧತೆಯನ್ನು ಹೊಂದಿರಬೇಕು. ಸ್ಪರ್ಧಾ ಮನೋಭಾವ ಒಳ್ಳೆಯದು, ಆದರೆ, ಸ್ವಾರ್ಥ ಇರಬಾರದು.




