ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವಪಕ್ಷದ ಹಿರಿಯ ಶಾಸಕರೇ ಬಹಿರಂಗವಾಗಿ ಒಬ್ಬೊಬ್ಬರಾಗಿ ಮುಗಿಬಿದಿದ್ದಾರೆ.
ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಮಾಡಿದ್ದ ಶಾಸಕ ಬಿ.ಆರ್.ಪಾಟೀಲ್ ಬೆನ್ನಲ್ಲೇ ಶಾಸಕ ರಾಜು ಕಾಗೆ ಅವರೂ ಸಹ ಸರ್ಕಾರದ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ.
ನಿನ್ನೆಯಷ್ಟೇ ಆಡಳಿತ ಸಂಪೂರ್ಣ ಕುಸಿದಿದೆ ಎಂದಿದ್ದ ರಾಜು ಕಾಗೆ ಅವರು, ಇದೀಗ ಸಿಎಂ ಸಿದ್ದರಾಮಯ್ಯ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ವರ್ಗದ ವಿರುದ್ಧವೂ ಗುಡುಗಿದ್ದಾರೆ.
ಸಚಿವರ ಭೇಟಿಗೆ ಶಾಸಕರಿಂದ ಸಾಧ್ಯವಾಗುತ್ತಿಲ್ಲ. ಫೋನ್ ನಲ್ಲಿಯೂ ಸಿಗಲ್ಲ. ಅವರ ಪಿಎಗಳು ಸಹ ಯಾವುದೇ ಉತ್ತರ ನೀಡಲ್ಲ. ಕೆಪಿಸಿಸಿ ಅಧ್ಯಕ್ಷರಂತೂ ನಮ್ಮನ್ನು ನೋಡುವುದೇ ಇಲ್ಲ.
ಸಚಿವರೂ ಸೇರಿದಂತೆ ಯಾರಿಗೆ ನಮಸ್ಕಾರ ಮಾಡಿದ್ರೂ ನಮ್ಮನ್ನು ಕ್ಯಾರೇ ಎನ್ನುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರಂತೂ ಈ ಮೊದಲಿನಂತಿಲ್ಲ. ನಾನು ಬಿಜೆಪಿಯಲ್ಲಿದ್ದಾಗ ಅನುದಾನ ನೀಡುತ್ತಿದ್ದರು. ವಿಪಕ್ಷದಲ್ಲಿದ್ದಾಗ ಅಭಿವೃದ್ಧಿಗೆ ಸಹಕಾರ ನೀಡಿದ್ದರು. ಆದ್ರೆ ಈಗ ನಾವು ಅವರದ್ದೇ ಪಕ್ಷದಲ್ಲಿದ್ದರೂ ಡೋಂಟ್ ಕೇರ್ ಎಂಬ ಪರಿಸ್ಥಿತಿ ಇದೆ.
ಪರಿಸ್ಥಿತಿ ಹೀಗಿರುವಾಗ ನಾವು ಯಾರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳಬೇಕು ಎಂದು ಅಸಮಾಧಾನ ಹೊರ ಹಾಕಿದ್ದಾರೆ. 2013 ರಿಂದ 2018ರವರೆಗೆ ಇದ್ದಂತೆ ಸಿದ್ದರಾಮಯ್ಯ ಈಗ ಇಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದೆ. ಬಿ.ಆರ್.ಪಾಟೀಲ ಅವರು ಮಾಡಿದ ಭ್ರಷ್ಟಾಚಾರ ಆರೋಪವು ಸತ್ಯವಾಗಿದೆ. ನನಗೂ ಅಂಥದ್ದೇ ಪರಿಸ್ಥಿತಿ ಬಂದಿದೆ. ಕ್ಷೇತ್ರದಲ್ಲಿ ಒಂದೂ ಕೆಲಸಗಳು ಆಗುತ್ತಿಲ್ಲ. ಇದನ್ನು ಖಂಡಿಸಿ ನಾನು ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ ಎಂದು ನಿನ್ನೆ ರಾಜು ಕಾಗೆ ಕಿಡಿ ಕಾರಿದ್ದು ಗೊತ್ತೇ ಇದೆ.




