ಡೆಹ್ರಾಡೂನ್: ಮೂರು ದಿನಗಳ ಉತ್ತರಾಖಂಡ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಕಾರ್ಯಕ್ರಮವೊಂದರಲ್ಲಿ ಹಠಾತ್ತನೆ ಕುಸಿದು ಬಿದ್ದಿದ್ದು, ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿ ನೈನಿತಾಲ್ ರಾಜಭವನಕ್ಕೆ ಕರೆದೊಯ್ಯಲಾಗಿದೆ.
ಕುಮಾವೂನ್ ವಿಶ್ವವಿದ್ಯಾಲಯದ 50ನೇ ವಾರ್ಷಿಕೋತ್ಸವ ಆಚರಣೆಗೆ ಉಪರಾಷ್ಟ್ರಪತಿಗಳು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.ಕಾರ್ಯಕ್ರಮ ಮುಗಿದ ಸ್ವಲ್ಪ ಸಮಯದ ನಂತರ ಆರೋಗ್ಯ ಹದಗೆಟ್ಟಿತ್ತು. ಏಕಾಏಕಿ ಉಪರಾಷ್ಟ್ರಪತಿಗಳು ಕುಸಿದು ಬಿದ್ದಿದ್ದಕ್ಕೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ನೈನಿತಾಲ್ನ ಕುಮಾವೂನ್ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ, ಉಪರಾಷ್ಟ್ರಪತಿ ಧನಕರ್ 45 ನಿಮಿಷಗಳ ಸುದೀರ್ಘ ಭಾಷಣ ಮಾಡಿದರು.
ನಂತರ, ವೇದಿಕೆಯಿಂದ ಇಳಿಯುವಾಗ ಆರೋಗ್ಯ ಏರುಪೇರಾಗಿದ್ದು, ಪಕ್ಕದಲ್ಲೇ ಇದ್ದ ಮಾಜಿ ಸಂಸದ ಡಾ.ಮಹೇಂದ್ರ ಸಿಂಗ್ ಪಾಲ್ ಮೇಲೆಯೇ ಕುಸಿದು ಬಿದ್ದರು. ಸ್ಥಳದಲ್ಲೇ ಇದ್ದ ವೈದ್ಯರ ತಂಡ ಪ್ರಾಥಮಿಕ ಚಿಕಿತ್ಸೆ ನೀಡಿತು.
ನಂತರ ರಾಜ್ಯಪಾಲ ಗುರ್ಮಿತ್ ಸಿಂಗ್ರೊಂದಿಗೆ ರಾಜಭವನಕ್ಕೆ ಕರೆದೊಯ್ಯಲಾಯಿತು. ಸದ್ಯ ಉಪರಾಷ್ಟ್ರಪತಿಯವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.




