ಆಲಮಟ್ಟಿ: ವಿಜಯಪುರ ಜಿಲ್ಲೆಯ ರೈತರಿಗೆ ಕೊಳವೆಬಾವಿ ಮತ್ತು ತೆರೆದ ಬಾವಿಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಮೇಟಿ ಬಣ) ಬ.ಬಾಗೇವಾಡಿ ತಾಲ್ಲೂಕು ಅಧ್ಯಕ್ಷ ವಿನೋದ ಪವಾರ ಹೇಳಿದರು.
ಬುಧವಾರ ಆಲಮಟ್ಟಿ ಪ್ರವಾಸಿ ಮಂದಿರದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಹೆಸ್ಕಾಂ ನವರು ಒಂದು ಆರ್.ಆರ್.ನಂಬರ್ ಕೊಡಲು ಹತ್ತು ಸಾವಿರ ಠೇವಣಿ ಮತ್ತು ಪ್ರತಿ ಎಚ್.ಪಿಗೆ 1650ರೂ.ಗಳನ್ನು ನಿಗದಿಗೊಳಿಸಿದೆ ಇದರಿಂದ ಬರಗಾಲಪೀಡಿತವಾಗುವ ವಿಜಯಪುರ ಜಿಲ್ಲೆಯ ರೈತರಿಗೆ ಬಿಸಿತುಪ್ಪವಾಗಿದೆ ಎಂದು ದೂರಿದರು.
ವಿಜಯಪುರ ಜಿಲ್ಲೆಯ ಅಖಂಡ ಬಸವನಬಾಗೇವಾಡಿ ತಾಲ್ಲೂಕಿನ ಕೂಡಗಿಯಲ್ಲಿ ನಿರ್ಮಿಸಲಾಗಿರುವ ಉಷ್ಣ ವಿದ್ಯುತ್ ಉತ್ಪಾದನಾ ಘಟಕದ ಭೂಮಿ ಪೂಜೆ ನೆರವೇರಿಸುವ ವೇಳೆಯಲ್ಲಿ ಸಚಿವರಾದಿಯಾಗಿ ವಿಜಯಪುರ ಜಿಲ್ಲೆಯ ಜನತೆಗೆ 24×7 ದಿನ ಉಚಿತ ವಿದ್ಯುತ್ ಪೂರೈಸಲಾಗುವದು ಎಂದು ಭರವಸೆ ನೀಡಿದ್ದರು. ಆ ಭರವಸೆಯು ಇನ್ನೂವರೆಗೆ ಈಡೇರಿಸಿಲ್ಲ ಎಂದು ಕಟುವಾಗಿ ಟೀಕಿಸಿದರು.
ಜಿಲ್ಲೆಯ ಜನರು ವಿವಿಧ ಯೋಜನೆಗಳಿಗೆ ಲಕ್ಷಾಂತರ ಎಕರೆ ಜಮೀನನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸರ್ಕಾರ ತ್ಯಾಗ ಮಾಡಿದ ಜಿಲ್ಲೆಯ ರೈತರಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಇಲ್ಲದಿದ್ದರೆ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇನ್ನು ರಾಜ್ಯ ಸರ್ಕಾರದ ವಸತಿ ಯೋಜನೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸ್ವತಃ ಯೋಜನಾ ಆಯೋಗದ ಉಪಾಧ್ಯಕ್ಷ ಶಾಸಕ ಬಿ.ಆರ್.ಪಾಟೀಲ ಅವರೆ ಹೇಳಿದ್ದಾರೆ. ಅವರು ಹೇಳಿದ್ದರಲ್ಲಿ ಯಾವ ಉತ್ಪ್ರೇಕ್ಷೆ ಇಲ್ಲ, ಇದು ನಿರಂತರವಾಗಿ ನಡೆಯುತ್ತಿದೆ. ವಸತಿ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆಯಿಂದ ಆರಂಭವಾಗಿ ಮನೆಯ ಕಟ್ಟಡ ಪೂರ್ಣಗೊಂಡು ಕೊನೆಯ ಬಿಲ್ ಪಡೆಯುವವರೆಗೂ ಭ್ರಷ್ಟಾಚಾರ ಹಬ್ಬಿದೆ. ಕೂಡಲೇ ಸರ್ಕಾರ ನಡೆಸುವವರು ಪ್ರಾಮಾಣಿಕರಾಗಿದ್ದರೆ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಶೋಕ ಚವ್ಹಾಣ, ಕಲ್ಲಪ್ಪ ಸುಣಗಾರ, ಶಿವರಾಜ ಕಡಬಗಾವಿ, ಮಹೇಶ ಚವ್ಹಾಣ ಹಾಗೂ ಮತ್ತಿತರರು ಸೇರಿದ್ದರು.
ವರದಿ : ಕೃಷ್ಣ ಎಚ್ ರಾಥೋಡ್




