ತಮಿಳುನಾಡು : ಈಗಿನ ಕಾಲದಲ್ಲಿ ಜನರಿಗೆ ಆಸ್ತಿ, ಹಣ, ಐಶ್ವರ್ಯ ಜನರಿಗೆ ಇದ್ದಷ್ಟೂ ಸಾಕಾಗಲ್ಲ. ಅಂತಹದ್ರಲ್ಲಿ ಇಲ್ಲೊಬ್ಬರು ತನ್ನ ಬಳಿ ಇದ್ದ ಬರೋಬ್ಬರಿ 4 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹಿಂದೆ ಮುಂದೆ ನೋಡದೆ ದೇಗುಲಕ್ಕೆ ದಾನ ಮಾಡಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ರೇಣುಗುಂಬಲ ಅಮ್ಮನ ದೇವಾಲಯದಲ್ಲಿ ನಡೆದಿದೆ.
ನಿವೃತ ಸೇನಾಧಿಕಾರಿಯಾಗಿರುವ ಅರಣಿ ಸಿಟಿಯ ಕೇಶವಪುರಂ ಗ್ರಾಮದ ವಿಜಯನ್ ಬಾಲ್ಯದಿಂದಲೂ ರೇಣುಗುಂಬಲ ಅಮ್ಮನನವರ ಭಕ್ತ.. ನಿವೃತ ಸೇನಾಧಿಕಾರಿಯಾಗಿದ್ದ ಇವರು ಕಳೆದ 10 ವರ್ಷದ ಹಿಂದೆ ಕಾರಣಾಂತರಗಳಿಂದ ಪತ್ನಿಯಿಂದ ದೂರವಿದ್ದರು.
ಪತ್ನಿಯಿಂದ ದೂರವಾದ ಜೊತೆಗೆಯೇ ಕುಟುಂಬದಿಂದ ಯಾವುದೇ ಸಹಾಯ, ಬೆಂಬಲ ಸಿಗುತ್ತಿರಲಿಲ್ಲ.. ಇನ್ನೊಂದೆಡೆ ಅಮ್ಮನ ಜೊತೆ ಇದ್ದ ಇಬ್ಬರು ಮಕ್ಕಳು ದಿನನಿತ್ಯ ನಮಗೆ ಆಸ್ತಿ ಬೇಕು ಪಾಲು ಮಾಡಿ ಎಂದು ಗಲಾಟೆ ಮಾಡುತ್ತಲೇ ಇದ್ದರು. ಇವೆಲ್ಲವನ್ನೂ ಹತ್ತಿರದಿಂದ ನೋಡಿದ ವಿಜಯನ್ ಬಹಳ ಬೇಸರಗೊಂಡಿದ್ದರು.
ಅಷ್ಟೇ ಅಲ್ಲದೆ ಮಕ್ಕಳ ಈ ವರ್ತನೆ, ಅವರಿಂದ ಆಗುತ್ತಿರುವ ಅಪಮಾನದಿಂದ ಬೇಸತ್ತ ವಿಜಯನ್ ತಮ್ಮ ಆಸ್ತಿಗೆ ಸಂಬಂಧಿಸಿದ ನಾಲ್ಕು ಪುಟದ ದಾಖಲೆಗಳನ್ನು ಹುಂಡಿಗೆ ಹಾಕಿದ್ದಾರೆ. ವರದಿಯ ಪ್ರಕಾರ, ವಿಜಯನ್ ಅವರು ಹಾಕಿದ ಆಸ್ತಿಯಲ್ಲಿ ಒಂದು ಆಸ್ತಿ ಮೂರು ಕೋಟಿ ಮೌಲ್ಯದ್ದಾಗಿದ್ದು, ಮತ್ತೊಂದು ಆಸ್ತಿ 1 ಕೋಟಿ ಮೌಲ್ಯದ್ದಾಗಿದೆ.
ಇನ್ನು ಜೂನ್ 24 ರಂದು ಅರಲುಮಿಗು ರೇಣುಗುಂಬಲ ಅಮ್ಮಾನ್ ದೇವಾಲಯದ ಹುಂಡಿ ಎಣಿಕೆ ಮಾಡುವ ವೇಳೆ ಆಸ್ತಿ ಪತ್ರ ಪತ್ತೆಯಾಗಿದೆ. ಇದನ್ನು ಪರಿಶೀಲಿಸಿದಾಗ ಒರಿಜಿನಲ್ ಎಂದು ಗೊತ್ತಾಗಿದೆ. ಕೂಡಲೇ ವಿಜಯನ್ ಅವರನ್ನು ಸಂಪರ್ಕಿಸಿ ಮಾತಾಡಿದ್ದಾರೆ.
ಅದಕ್ಕೆ ವಿಜಯನ್.. ನನ್ನ ಆಸ್ತಿ ಸಂಪೂರ್ಣವಾಗಿ ದೇವಾಲಯಕ್ಕೆ ಅರ್ಪಿಸಿದ್ದೇನೆ. ನನ್ನ ಮಕ್ಕಳು ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಅಲ್ಲದೇ ನನಗೆ ಒಂದು ರೂಪಾಯಿ ಕೂಡ ಕೊಡದೆ ಸತಾಯಿಸುತ್ತಿದ್ದಾರೆ. ಹಣ ಬೇಕು ಅಂದ್ರೆ ಆಸ್ತಿ ಮಾರು ಎಂದು ಬೆದರಿಕೆ ಹಾಕುತ್ತಿದ್ದಾರೆ.
ಮಕ್ಕಳ ಈ ವರ್ತನೆಯಿಂದ ಬಹಳ ನೋವು ಉಂಟಾಗಿ ಕಡೆ ಕ್ಷಣದಲ್ಲೂ ನಮ್ಮನ್ನು ಸರಿಯಾಗಿ ನೋಡಿಕೊಳ್ಳದ ಅವರಿಗೆ ಆಸ್ತಿ ಸಿಗಬಾರದು ಎಂದು ಯೋಚಿಸಿ ಕಾನೂನು ಬದ್ಧವಾಗಿ ಆಸ್ತಿಯನ್ನು ದೇವರಿಗೆ ಕೊಡುತ್ತೇನೆ ಎಂದು ವಿಜಯನ್ ತಿಳಿಸಿದ್ದಾರೆ.




