ಕೇರಳ: ತ್ರಿಶೂರ್ನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ಇಬ್ಬರು ನವಜಾತ ಶಿಶುಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ 23 ವರ್ಷದ ಮಹಿಳೆ ಮತ್ತು ಆಕೆಯ ಸ್ನೇಹಿತನನ್ನು ಬಂಧಿಸಿದ್ದಾರೆ.
ಶನಿವಾರ ರಾತ್ರಿ 25 ವರ್ಷದ ಭವಿನ್ ಎಂಬಾತ ತೀವ್ರ ಕುಡಿದ ಅಮಲಿನಲ್ಲಿ ಪುದುಕ್ಕಾಡ್ ಪೊಲೀಸ್ ಠಾಣೆಗೆ ಎರಡು ಶಿಶುಗಳ ಅಸ್ಥಿಪಂಜರದ ಅವಶೇಷಗಳನ್ನು ಹೊಂದಿರುವ ಚೀಲವನ್ನು ಹೊತ್ತುಕೊಂಡು ಹೋಗಿದ್ದ. ಅಂಬಲ್ಲೂರು ಮೂಲದ ಭವಿನ್ ಎಂಬಾತ ತನ್ನ ಗೆಳತಿ ಅನೀಷಾ ತಮ್ಮ ಶಿಶುಗಳನ್ನು ಕೊಂದಿದ್ದಾಳೆ ಎಂದು ಅಧಿಕಾರಿಗಳಿಗೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನವಜಾತ ಶಿಶುಗಳ ಅಸ್ಥಿ ಪಂಜರ ನೋಡಿ ಪೊಲೀಸ್ ಅಧಿಕಾರಿಗಳು ಆಘಾತಕ್ಕೊಳಗಾದರು. ಚಾಲಕುಡಿ ಡಿವೈಎಸ್ಪಿ ತಕ್ಷಣ ಕರೆ ಮಾಡಿ, ಗೆಳತಿ ಶಿಶುಗಳನ್ನು ಕೊಂದಿದ್ದಾಳೆ ಎಂಬ ಭವಿನ್ ಹೇಳಿಕೆಯನ್ನು ಪರಿಶೀಲಿಸಲು ಸೂಚಿಸಿದರು. ಪ್ರಕರಣದ ತನಿಖೆಗಾಗಿ ಮಧ್ಯರಾತ್ರಿಯಲ್ಲಿ ತಂಡವನ್ನು ರಚಿಸಲಾಯಿತು ಮತ್ತು ಶಿಶುಗಳ ತಾಯಿ ಅನೀಷಾ (23) ಅವರನ್ನು ಸಹ ವಶಕ್ಕೆ ಪಡೆಯಲಾಯಿತು ಎಂದು ಮಾಹಿತಿ ನೀಡಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಅನೀಷಾ ತಮ್ಮ ಎರಡನೇ ಮಗುವನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನಂತರ, ಕೊಲೆ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. 2020 ರಲ್ಲಿ ಈ ಜೋಡಿ ಫೇಸ್ಬುಕ್ನಲ್ಲಿ ಭೇಟಿಯಾಗಿತ್ತು. ಅನೀಷಾ ತಾಯಿಯ ವಿರೋಧದ ನಡುವೆಯೂ ಇಬ್ಬರು ಸಂಬಂಧದಲ್ಲಿದ್ದರು ಎಂದು ವರದಿಯಾಗಿದೆ. ಅನೀಷಾ ಪ್ರಕಾರ ತಮ್ಮ ತಾಯಿ ಮತ್ತು ತಮ್ಮನಿಗೆ ಈ ಘಟನೆಗಳ ಬಗ್ಗೆ ತಿಳಿದಿರಲಿಲ್ಲ.




