ಕೋಲ್ಕತ್ತ: ಕಾನೂನು ಸಂಘರ್ಷ ಪೂರ್ಣಗೊಳ್ಳುವವರೆಗೆ ಪತ್ನಿ ಹಸೀನ್ ಜಹಾನ್ ಹಾಗೂ ಮಗಳ ಜೀವನ ನಿರ್ವಹಣೆಗೆ ಪ್ರತಿ ತಿಂಗಳು 4 ಲಕ್ಷ ರು. ಪಾವತಿಸುವಂತೆ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರಿಗೆ ಕೊಲ್ಕತ್ತ ಹೈಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿ ಅಜಯ್ ಕುಮಾರ್ ಮುಖರ್ಜಿ ಅವರಿದ್ದ ಪೀಠವು ಆದೇಶ ಹೊರಡಿಸಿದೆ. ಶಮಿ ಪತ್ನಿ ಜಹಾನ್ ವೈಯಕ್ತಿಕ ಜೀವನಾಂಶಕ್ಕಾಗಿ ತಿಂಗಳಿಗೆ 1.5 ಲಕ್ಷ ರೂಪಾಯಿ ಮತ್ತು ಅಪ್ರಾಪ್ತ ಮಗಳ ಆರೈಕೆ, ವೆಚ್ಚಗಳಿಗಾಗಿ 2.5 ಲಕ್ಷ ರೂಪಾಯಿಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿದ್ದಾರೆ.

ಶಮಿ ತಿಂಗಳಿಗೆ 50,000 ರೂ. ಮತ್ತು ತಮ್ಮ ಮಗಳ ಖರ್ಚಿಗಾಗಿ ಹೆಚ್ಚುವರಿಯಾಗಿ 80,000 ರೂ.ಗಳನ್ನು ಪಾವತಿಸುವಂತೆ ಕೋಲ್ಕತ್ತಾದ ಅಲಿಪೋರ್ ನ್ಯಾಯಾಲಯವು 2018 ರಲ್ಲಿ ನೀಡಿದ್ದ ಆದೇಶದ ವಿರುದ್ಧ ಜಹಾನ್ ಮೇಲ್ಮನವಿ ಸಲ್ಲಿಸಿದ್ದರು. ಆ ಸಮಯದಲ್ಲಿ, ಜಹಾನ್ ತನಗೆ 7 ಲಕ್ಷ ರೂ. ಮತ್ತು ತನ್ನ ಮಗಳಿಗೆ 3 ಲಕ್ಷ ರೂ.ನಂತೆ ಒಟ್ಟು 10 ಲಕ್ಷ ರೂ. ಕೇಳಿದ್ದರು. ಆದರೆ, ಕೆಳಹಂತದ ನ್ಯಾಯಾಲಯವು ಅವರ ವಿನಂತಿಯನ್ನು ವಜಾಗೊಳಿಸಿತ್ತು.
ಶಮಿ ಆರ್ಥಿಕ ಪರಿಸ್ಥಿತಿಯು ಹೆಚ್ಚಿನ ಜೀವನಾಂಶವನ್ನು ನೀಡಲು ಸಹಾಯ ಮಾಡುತ್ತದೆ ಎಂದು ಜಹಾನ್ ಕಾನೂನು ಸಲಹೆಗಾರರು ತಮ್ಮ ಮೇಲ್ಮನವಿಯಲ್ಲಿ ವಾದಿಸಿದ್ದರು. 2021 ರ ಹಣಕಾಸು ವರ್ಷದ ಅವರ ಆದಾಯ ತೆರಿಗೆ ರಿಟರ್ನ್ ಪ್ರಕಾರ, ಶಮಿ ಅವರ ವಾರ್ಷಿಕ ಆದಾಯ ಸುಮಾರು 7.19 ಕೋಟಿ ರೂ. ಅಂದರೆ, ತಿಂಗಳಿಗೆ ಸುಮಾರು 60 ಲಕ್ಷ ರೂ. ಆಗಿತ್ತು. ಜಹಾನ್ ತನ್ನ ಮಗಳ ಖರ್ಚು ಸೇರಿದಂತೆ ತನ್ನ ಒಟ್ಟು ಮಾಸಿಕ ಖರ್ಚು 6 ಲಕ್ಷ ರೂ. ಮೀರಿದೆ ಎಂದು ಹೇಳಿಕೊಂಡಿದ್ದಾರೆ.




