ಬೆಂಗಳೂರು : ದೇವನಹಳ್ಳಿ ರೈತರ ಭೂಸ್ವಾಧೀನ ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರು ರೈತರ ಕುರಿತಾಗಿ ಕರುಣೆ ತೋರುವ ಮೂಲಕ ಅನ್ನದಾತರಿಗೆ ಒಳ್ಳೆಯದನ್ನು ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಕಾಂಗ್ರೆಸ್ನ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ರೈತರ ಪರ ಧ್ವನಿ ಎತ್ತಿದ್ದಾರೆ.
ದೇವನಹಳ್ಳಿ ರೈತರ ಭೂಸ್ವಾಧೀನ ವಿರೋಧಿ ಈಗಾಗಲೇ ಹೋರಾಟ ನಡೆಯುತ್ತಿದ್ದು, ಇದೀಗ ರಮ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್) ಈ ಬಗ್ಗೆ ಟ್ವೀಟಿಸಿದ್ದು, ರೈತರ ಹೋರಾಟದ ಕೆಲ ವರದಿಗಳು ಹಂಚಿಕೊಳ್ಳುವ ಮೂಲಕ ಸರ್ಕಾರಕ್ಕೆ ರೈತರ ಸಮಸ್ಯೆ ಆಲಿಸುವಂತೆಯೂ ಮನವಿ ಮಾಡಿದ್ದಾರೆ.
ಭೂಸ್ವಾಧೀನ ಸಮಸ್ಯೆ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇದೆ. ಕೈಗಾರಿಕೆಗಳು ಉದ್ಯೋಗಗಳನ್ನು ಸೃಷ್ಟಿಸುತ್ತವೆ, ಆದರೆ ರೈತರ ಜೀವನೋಪಾಯವನ್ನು ಸಹ ನಾವು ಕಾಪಾಡಿಕೊಳ್ಳುವುದು ಅಗತ್ಯವಿದೆ ಎಂದು ರಮ್ಯಾ ಪ್ರತಿಪಾದಿಸಿದ್ದಾರೆ.
ಉದ್ದೇಶಿತ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿಗಾಗಿ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಗೆ ಸೇರಿದ ಚನ್ನರಾಯಪಟ್ಟಣ, ಮಟ್ಟಿಬಾರ್ಲು ಮತ್ತು ಶ್ರೋತ್ರೀಯ ತೆಲ್ಲೋಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿನ 495 ಎಕರೆ ಜಮೀನನ್ನು ಸ್ವಾಧೀನ ಮಾಡದಿರಲು ಸರ್ಕಾರದಿಂದ ತೀರ್ಮಾನಿಸಲಾಗಿದೆ. ಜತೆಗೆ ಈ ಹೋಬಳಿಯಲ್ಲಿ ಇನ್ನು ಮುಂದೆ ಕೈಗಾರಿಕಾ ಉದ್ದೇಶಗಳಿಗೆ ಸರ್ಕಾರ ಯಾವುದೇ ಜಮೀನನ್ನು ವಶಪಡಿಸಿಕೊಳ್ಳದೆ ಇರಲು ನಿರ್ಧರಿಸಿದೆ.
ಆದ್ದರಿಂದ ಭೂಸ್ವಾಧೀನ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ತಮ್ಮ ಹೋರಾಟವನ್ನು ಕೈಬಿಡಬೇಕು ಎಂದು ಇತ್ತೀಚೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ತಿಳಿಸಿದ್ದರು.
ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕಿಗೆ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1,777 ಎಕರೆ 2 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು 2021ರ ಆ.27ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಇದಾದ ಮೇಲೆ 2022ರ ಫೆ.15ರಂದು ಈ ಸಂಬಂಧ ಆದೇಶ ಹೊರಡಿಸಲಾಗಿತ್ತು.
ಆದರೆ ಹೋಬಳಿಯ ರೈತರು ಈಗಾಗಲೇ ಎರಡು ಬಾರಿ ಕೈಗಾರಿಕಾ ಉದ್ದೇಶಗಳಿಗಾಗಿ ಜಮೀನು ಕಳೆದುಕೊಂಡಿದ್ದಾರೆ. ಜತೆಗೆ ಚನ್ನರಾಯಪಟ್ಟಣ, ಮಟ್ಟಿಬಾರ್ಲು ಮತ್ತು ಶ್ರೋತ್ರೀಯ ತೆಲ್ಲೋಹಳ್ಳಿಗಳಲ್ಲಿನ ನೀರಾವರಿ, ಕೃಷಿ ಮತ್ತು ಜನವಸತಿಗಳನ್ನು ಪರಿಗಣಿಸಿ ಭೂಸ್ವಾಧೀನದಿಂದ ಈ ಹಳ್ಳಿಗಳ 231.23 ಎಕರೆ, 185.18 ಎಕರೆ ಮತ್ತು 78.21 ಎಕರೆಗೆ ಸ್ವಾಧೀನ ಪ್ರಕ್ರಿಯೆಯಿಂದ ವಿನಾಯಿತಿ ಕೊಡಲಾಗಿದೆ ಎಂದಿದ್ದರು.




