ನವದೆಹಲಿ: ಬಹುಬಾಷಾ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮತ್ತೊಮ್ಮೆ ಅನಿಮಲ್ ಚಿತ್ರದ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿತು. ಆದರೆ, ಇಂಟರ್ನೆಟ್‌ನ ಒಂದು ಭಾಗವು ಪುರುಷತ್ವ ಮತ್ತು ಸ್ತ್ರೀದ್ವೇಷದ ಬಗ್ಗೆ ಟೀಕಿಸಿತು.

ಇತ್ತೀಚೆಗೆ ಮೋಜೋ ಸ್ಟೋರಿಯಲ್ಲಿ ಬರ್ಖಾ ದತ್ ಅವರೊಂದಿಗಿನ ಮಾತುಕತೆಯಲ್ಲಿ, ತೆರೆ ಮೇಲೆ ಧೂಮಪಾನ ಮಾಡುತ್ತೀರಾ ಎಂದು ಕೇಳಲಾಯಿತು. ತೆರೆ ಮೇಲೆ ಧೂಮಪಾನ ಮಾಡಲು ತಮಗೆ ಹಿಂಜರಿಕೆ ಇದ್ದರೂ, ಅವರು ಚಿತ್ರದಲ್ಲಿ ರಣಬೀರ್ ಕಪೂರ್ ಅವರ ಪಾತ್ರವನ್ನು ಸಮರ್ಥಿಸಿಕೊಂಡರು.

‘ನಾನು ಸಿನಿಮಾವನ್ನು ಸಿನಿಮಾವಾಗಿಯೇ ನೋಡಿದೆ. ಒಬ್ಬ ನಾಯಕ ತೆರೆ ಮೇಲೆ ಧೂಮಪಾನ ಮಾಡುವಾಗ, ಅವನು ಇತರರ ಮೇಲೆ ಪ್ರಭಾವ ಬೀರುತ್ತಿದ್ದಾನೆ ಎಂದು ಜನರು ಹೇಳುತ್ತಾರೆ. ಆದರೆ, ಇಂದು ಸಮಾಜದಲ್ಲಿ ಧೂಮಪಾನ ಮಾಡುವುದು ತುಂಬಾ ಸಾಮಾನ್ಯವಾಗಿದೆ. ಯಾವುದೇ ರೀತಿಯಲ್ಲಿ ಪ್ರಭಾವಿತರಾಗಲು ನಾನು ಸಿನಿಮಾ ನೋಡುವುದಿಲ್ಲ. ವೈಯಕ್ತಿಕವಾಗಿ, ನಾನು ತೆರೆ ಮೇಲೆ ಎಂದಿಗೂ ಧೂಮಪಾನ ಮಾಡುವುದಿಲ್ಲ. ಆದರೆ, ಅದು ನನ್ನ ದೃಷ್ಟಿಕೋನ’ ಎಂದರು.

‘ನಾನು ಅನಿಮಲ್ ಚಿತ್ರದ ಭಾಗವಾಗಿದ್ದು, ಸಿನಿಮಾವನ್ನು ಸಿನಿಮಾದಂತೆ ನೋಡಿ ಎಂದು ನಾನು ಈಗಲೂ ಹೇಳುತ್ತೇನೆ. ನೀವು ಸಿನಿಮಾಗಳನ್ನು ನೋಡುವುದರಿಂದ ಪ್ರಭಾವಿತರಾಗುತ್ತೀರಿ ಎಂದರೆ, ನಿಮಗೆ ಒಪ್ಪುವಂತಹ ಚಿತ್ರಗಳನ್ನು ಮಾತ್ರ ನೋಡಿ. ಯಾರೂ ಯಾರನ್ನೂ ಯಾವುದೇ ಚಿತ್ರ ನೋಡಲು ಒತ್ತಾಯಿಸುವುದಿಲ್ಲ. ಹಾಗಿದ್ದಲ್ಲಿ, ಪ್ರತಿ ಚಿತ್ರವೂ ಬ್ಲಾಕ್‌ಬಸ್ಟರ್ ಆಗುತ್ತಿತ್ತು’ ಎಂದು ರಶ್ಮಿಕಾ ಹೇಳಿದರು.




