ಚಿತ್ರದುರ್ಗ: ಇಂದು ಗುರು ಪೂರ್ಣಿಮೆಯ ಶುಭ ದಿನ. ಈ ದಿನವನ್ನು ಆಷಾಢ ಪೂರ್ಣಿಮಾವೆಂದೂ ಕರೆಯುತ್ತಾರೆ. ಯಾಕೆಂದರೆ, ಇದು ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಾಗಿದೆ. ಈ ಶುಭ ದಿನದಂದು ನಾವು ನಮ್ಮ ಹಿರಿಯರಿಗೆ,ಪಾಠ ಕಲಿಸಿದ ಗುರುಗಳಿಗೆ ಗೌರವವನ್ನು, ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಈ ಕಾರಣಕ್ಕಾಗಿ ಹಿಂದೂ ಧರ್ಮದಲ್ಲಿ ಗುರು ಪೂರ್ಣಿಮಾಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ.
ಮೊಳಕಾಲ್ಮುರು ಪಟ್ಟಣದಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಶಿರಡಿ ಸಾಯಿ ಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಕೈಂಕಾರ್ಯಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸದ್ಭಕ್ತಿಯಿಂದ ನಡೆದವು.
ಮುಂಜಾನೆಯಿಂದ ಸಾಯಿಬಾಬಾ ಮಂದಿರದಲ್ಲಿ ವಿವಿಧ ಪೂಜೆಗಳು ಆರಂಭಗೊಂಡವು. ಗುರು ಪೂರ್ಣಿಮೆಯ ಪ್ರಯುಕ್ತ ಶ್ರೀ ಸಾಯಿಬಾಬಾ ದೇವರನ್ನು ವಿಶೇಷವಾಗಿ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು, ದೇವರಿಗೆ ಸಾಯಿ ಕಾಕಡ ಆರತಿ, ಭಕ್ತಾದಿಗಳ ಹಸ್ತದಿಂದ ಶ್ರೀ ಸಾಯಿ ಬಾಬಾ ವಿಗ್ರಹಕ್ಕೆ ಕ್ಷೀರಭಿಷೇಕ, ಶ್ರೀ ಸಾಯಿ ಸತ್ಯಾವ್ರತ ನಂತರ ಗುರು ಹಿರಿಯರಿಂದ ಆಶೀರ್ವಚನ, 108 ವಿಧದ ನೈವೇದ್ಯದೊಂದಿಗೆ ಮಧ್ಯಾಹ್ನ ಆರತಿ ತೀರ್ಥ ಪ್ರಸಾದ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಹಾಗೂ ಸಂಧ್ಯ ಆರತಿ ಪ್ರಸಾದ ವಿನಿಯೋಗ,ಭಕ್ತಿಗೀತೆಗಳ ವಾಚನ,ಸಾಯಿ ಪಲ್ಲಕ್ಕಿ ಸೇವೆ, ಶೇಜಾ ಆರತಿ ಸೇವೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದವು. ವಿಶೇಷವಾಗಿ ಸಾಯಿ ರಥ ಮೆರವಣಿಗೆ ನೋಡುಗರ ಗಮನ ಸೆಳೆಯಿತು. ಮಹಿಳೆಯರು ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ವರದಿ: PM ಗಂಗಾಧರ




