ತುರುವೇಕೆರೆ: ಪಟ್ಟಣದ ದಬ್ಭೇಘಟ್ಟ ರಸ್ತೆಯಲ್ಲಿರುವ ಬಸ್ ನಿಲ್ದಾಣದಿಂದ ನಿಟ್ಟೂರಿಗೆ ಹೊರಟಿದ್ದ ಸಾರಿಗೆ ಬಸ್ಸೊಂದು ಬ್ರೇಕ್ ವ್ಯಾಕ್ಯೂಮ್ ಖಾಲಿಯಾಗಿ ಬ್ರೇಕ್ ಜಾಮ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದೆ. ಸೋಮವಾರ ಸಂತೆಯ ದಿನವಾದರೂ ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಬಸ್ಸಿನಲ್ಲಿದ್ದ ಸುಮಾರು 50 ಕ್ಕೂ ಅಧಿಕ ಪ್ರಯಾಣಿಕರು, ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರ ಜೀವ ಉಳಿದಿದೆ.

ಎಂದಿನಂತೆ ಬಸ್ ಪ್ರಯಾಣಿಕರನ್ನು ಹತ್ತಿಸಿಕೊಂಡು ಸಾರಿಗೆ ಬಸ್ ನಿಲ್ದಾಣದಿಂದ ಹೊರಟಿದ್ದಲ್ಲದೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಎದುರು ಮತ್ತೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲಿಸಿದೆ. ನಂತರ ಅಲ್ಲಿಂದ ಹೊರಟು ಮಾಯಸಂದ್ರ ರಸ್ತೆಯಲ್ಲಿ ಪ್ರವಾಸಿ ಮಂದಿರ ಬಿಟ್ಟು ಮುಂದಕ್ಕೆ ಹೋಗುತ್ತಿದ್ದಂತೆ ಖಾಸಗಿ ದ್ವಿಚಕ್ರ ವಾಹನದ ಶೋರೂಂ ಬಳಿ ಇರುವ ಸ್ಪೀಡ್ ಬೇಕರ್ ಹಂಪ್ ಬಳಿ ಬಸ್ ಚಾಲಕನ ನಿಯಂತ್ರಣಕ್ಕೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ಸಿನ ಬ್ರೇಕಿನಲ್ಲಿ ಸಮಸ್ಯೆ ಅರಿತ ಚಾಲಕ ಬಸ್ಸು ನಿಲ್ಲಿಸಲು ಬ್ರೇಕ್ ಹಾಕಿದ್ದಾನೆ. ಆದರೆ ಬಸ್ಸಿನ ಬ್ರೇಕ್ ನಲ್ಲಿ ವ್ಯಾಕ್ಯೂಮ್ ಖಾಲಿಯಾಗಿದ್ದರಿಂದ ಬ್ರೇಕ್ ಜಾಮ್ ಆಗಿದೆ. ಚಾಲಕನ ನಿಯಂತ್ರಣ ಸಂಪೂರ್ಣ ತಪ್ಪಿದ ಬಸ್ ಖಾಸಗಿ ದ್ವಿಚಕ್ರವಾಹನ ಶೋರೂಂ ಬಳಿಗೆ ನುಗ್ಗಿ ಚರಂಡಿಯ ಚಪ್ಪಡಿ ಕಲ್ಲನ್ನು ಮುರಿದಿದೆ. ಚಾಲಕ ತಕ್ಷಣ ಗೇರು ಬದಲಿಸಿ ಬಸ್ ನಿಲ್ಲಿಸಿದ್ದಾನೆ. ಬಸ್ ನಿಂತರೂ ರಸ್ತೆ ಬದಿಯಲ್ಲಿ ನಿಂತಿದ್ದ ಲಗೇಜ್ ಆಟೋವೊಂದಕ್ಕೆ ಢಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಆಟೋ ಸ್ವಲ್ಪ ಜಖಂಗೊಂಡಿದ್ದರೂ, ಆಟೋದಲ್ಲಿ ಚಾಲಕ ಇಲ್ಲದ್ದರಿಂದ ಅನಾಹುತವಾಗಲಿಲ್ಲ. ಬಸ್ ನಿಲ್ಲದೆ ಹೋಗಿದ್ದರೆ ಶೋರೂಮ್ ಮುಂಭಾಗ ನಿಂತಿದ್ದ ದ್ವಿಚಕ್ರ ವಾಹನಗಳು, ಸಾರ್ವಜನಿಕರ ಮೇಲೆ ಬಸ್ ಹರಿಯುತ್ತಿತ್ತು, ಸಾಕಷ್ಟು ಜೀವಹಾನಿಯಾಗುವ ಸಂಭವವಿತ್ತು.

ಪ್ರಯಾಣಿಕರ ಆಕ್ರೋಶ: ಬಸ್ಸಿನಲ್ಲಿದ್ದ ಪ್ರಯಾಣಿಕರು ಮಾಧ್ಯಮದೊಂದಿಗೆ ಮಾತನಾಡಿ, ಬಸ್ ಡಿಪೋದವರು ಬಸ್ಸನ್ನು ನಿಲ್ದಾಣಕ್ಕೆ ಕಳಿಸುವ ಮುನ್ನ ಬಸ್ಸನ್ನು ಸಂಪೂರ್ಣವಾಗಿ ಪರೀಕ್ಷೆ ಮಾಡಿ ಕಳಿಸಬೇಕು. ರಿಪೇರಿ ಇರುವ ಬಸ್ಸನ್ನು ಕಳಿಸಿ ಜನರ ಜೀವದೊಂದಿಗೆ ಚೆಲ್ಲಾಟವಾಡಬಾರದು. ಚಾಲಕ ಬಸ್ಸನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಣ ಮಾಡದಿದ್ದರೆ ನಮ್ಮೆಲ್ಲರ ಜೀವ ಹೋಗುತ್ತಿತ್ತು. ಬಸ್ಸು ಪಟ್ಟಣದಿಂದ ಹೊರಗೆ ಬಂದ ನಂತರ ಈ ಅನಾಹುತ ಸಂಭವಿಸಿದೆ. ಇಂದು ತುರುವೇಕೆರೆಯಲ್ಲಿ ಸೋಮವಾರ ಸಂತೆದಿನ. ಪಟ್ಟಣದೊಳಗೆ ಈಗ ಆಗಿರುವಷ್ಟೇ ಆಗಿದ್ದರೂ ಹತ್ತಾರು ಜನರ ಪ್ರಾಣಹಾನಿಯಾಗುತ್ತಿತ್ತು. ಡಿಪೋ ಅಧಿಕಾರಿಗಳು, ಮೆಕ್ಯಾನಿಕ್ ಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರದಿ: ಗಿರೀಶ್ ಕೆ ಭಟ್




