ತುರುವೇಕೆರೆ : ಗೃಹ ಸಚಿವರ ತವರು ಜಿಲ್ಲೆಯಲ್ಲಿ ಗಾಂಜಾ, ಡ್ರಗ್ಸ್ ಸೇವನೆ, ಮಾಧಕ ವಸ್ತು ಸಾಗಣೆ ಹೆಚ್ಚಾಗಿದೆ. ಡ್ರಗ್ಸ್ ಮಾರಾಟಗಾರರಿಗೆ ಪೊಲೀಸರ ರಕ್ಷಣೆ ದೊರೆಯುತ್ತಿದೆ. ಡ್ರಗ್ಸ್ ಹಾವಳಿ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಓರ್ವ ಮಾಜಿ ಶಾಸಕನಾಗಿ ನಾನೇ ಖುದ್ದು ತಿಳಿಸಿದರೂ ಯಾವುದೇ ಕ್ರಮವಹಿಸುತ್ತಿಲ್ಲ. ಕೂಡಲೇ ಗಾಂಜಾ, ಡ್ರಗ್ಸ್, ಮಾದಕ ವಸ್ತು ಸಾಗಣೆ ಮಾಡುವವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಎದುರು ಧರಣಿ ಕೈಗೊಳ್ಳಲಾಗುವುದು ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಎಚ್ಚರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಗಾಂಜಾ, ಡ್ರಗ್ಸ್, ಮಾದಕ ವಸ್ತು ಸಾಗಣೆ ಮಾಡುವವರಿಗೆ ಪೊಲೀಸರೇ ಕಾವಲುಗಾರರಾಗಿದ್ದಾರೆ. ಮಾದಕ ವಸ್ತು ಬಳಕೆ ಮತ್ತು ಮಾರಾಟಗಾರರಿಗೆ ಪೊಲೀಸರ ಪ್ರೋತ್ಸಾಹ ಹೆಚ್ಚಾಗಿದೆ. ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದ ಯುವಸಮೂಹ ಇಂದು ಮಾದಕ ವಸ್ತುಗಳಿಗೆ ಬಲಿಯಾಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತು ಇಂತಹವರ ಮನೆಯಲ್ಲಿದೆ, ಇಂತಹವರು ಸಾಗಿಸುತ್ತಿದ್ದಾರೆ, ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಪೋಟೋ ಸಮೇತ ಖುದ್ದು ನಾನೇ ನೀಡಿದರೂ ಹಾ ಸರ್, ಓಕೆ ಸರ್, ಕ್ರಮ ವಹಿಸ್ತೇವೆ ಸರ್ ಎಂಬ ಕಂತೆಪುರಾಣಗಳನ್ನು ಹೇಳಿ ಮಾದಕ ವಸ್ತು ಮಾರಾಟ, ಸಾಗಣೆದಾರರಿಗೆ ಪೊಲೀಸರೇ ಮಾಹಿತಿ ನೀಡಿ ಅವರು ತಪ್ಪಿಸಿಕೊಳ್ಳಲು ಅವಕಾಶ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ವಿಧಾನಸಭಾ ಕ್ಷೇತ್ರದ ನನ್ನ ಸ್ವಂತ ಗ್ರಾಮದಲ್ಲಿ ಮಾದಕ ವ್ಯಸನದಿಂದಾಗಿ ಒಂದು ಕೊಲೆಯಾಗಿದೆ. ಈ ಬಗ್ಗೆ ಪೊಲೀಸರಿಗೆ ಅರಿವಿದ್ದರೂ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ಕಲ್ಲೂರು, ಕಲ್ಲೂರು ಕ್ರಾಸ್, ಸಿ.ಎಸ್.ಪುರ ಹಾಗೂ ತುರುವೇಕೆರೆ ಪಟ್ಟಣದಲ್ಲೂ ಡ್ರಗ್ಸ್, ಗಾಂಜಾ, ಮಾದಕ ವಸ್ತುಗಳು ರಾಜಾರೋಷವಾಗಿ ವಿಲೇವಾರಿಯಾಗುತ್ತಿದೆ. ಪೊಲೀಸರ ಕಣ್ಣಾಮುಚ್ಚಾಲೆ ಆಟದಿಂದಾಗಿ ಆರೋಪಿಗಳು ಕಾನೂನಿನ ಹಿಡಿತದಿಂದ ತಪ್ಪಿಸಿಕೊಂಡು ನಿರ್ಭಯವಾಗಿ ಮಾದಕ ವಸ್ತು ಸರಬರಾಜು ಮಾಡುತ್ತಾ ವಿದ್ಯಾರ್ಥಿಗಳು, ಯುವಜನರನ್ನು ಮಾದಕ ವಸ್ತುಗಳಿಗೆ ದಾಸರನ್ನಾಗಿ ಮಾಡಿ ಕುಟುಂಬವನ್ನು ಸರ್ವನಾಶ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮಾದಕ ವ್ಯಸನ ಮಾಡುವ ಯುವಕರು ಬೈಕ್ ವ್ಹೀಲಿಂಗ್, ಹೆಣ್ಣುಮಕ್ಕಳನ್ನು ಚುಡಾಯಿಸುವುದು, ಹಣಕ್ಕಾಗಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವುದು ನಡೆಯುತ್ತಿದೆ. ಬೈಕ್ ವ್ಹೀಲಿಂಗ್ ಮಾಡುವವರು, ಪರವಾನಗಿ ಇಲ್ಲದೆ ಹಾಗೂ ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಕಂಡು ಬಂದರೂ ಪೊಲೀಸರು ಕಾನೂನು ಕ್ರಮ ಜರುಗಿಸದೆ ಕಣ್ಮುಚ್ಚಿ ಕುಳಿತಿದ್ದಾರೆ. ರಾಜ್ಯ ಸರ್ಕಾರದ ಗೃಹ ಸಚಿವರ ಜಿಲ್ಲೆಯಲ್ಲೇ ಡ್ರಗ್ಸ್ ಸೇವನೆ, ಮಾರಾಟ ಪ್ರಕರಣಗಳು ಹೆಚ್ಚು ನಡೆಯುತ್ತಿರುವುದು ಜಿಲ್ಲೆಯಲ್ಲಿ ಹಾಗೂ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾದಕ ವಸ್ತುಗಳಿಂದ ಯುವಜನತೆ ನಾಶವಾಗುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಇಲಾಖೆ ಅಗತ್ಯ ಕ್ರಮ ವಹಿಸಬೇಕು. ಮಾದಕ ವಸ್ತು ಮಾರಾಟಗಾರರು, ಸಾಗಣೆದಾರರು, ಗಾಂಜಾ ಬೆಳೆಯುವವರನ್ನು ಮುಲಾಜಿಲ್ಲದೆ ಬಂಧಿಸಿ ಕಾನೂನು ರೀತಿ ಶಿಕ್ಷೆಗೆ ಗುರಿಪಡಿಸಬೇಕು. ಕೂಡಲೇ ಕ್ರಮವಹಿಸದಿದ್ದಲ್ಲಿ ಮಾದಕ ವ್ಯಸನದಿಂದ ತನ್ನ ಮಕ್ಕಳ ಭವಿಷ್ಯ ಹಾಳಾಗಿ ನೊಂದಿರುವ ಪೋಷಕರು, ಕುಟುಂಬದ ಜೊತೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಗೋಷ್ಟಿಯಲ್ಲಿ ಪಪಂ ಸದಸ್ಯ ಚಿದಾನಂದ್, ಬಿಜೆಪಿ ಮುಖಂಡರಾದ ವಿ.ಬಿ.ಸುರೇಶ್, ನಾಗಲಾಪುರ ಮಂಜಣ್ಣ, ಲಕ್ಷ್ಮೀನರಸಿಂಹ, ಹರ್ಷ, ಬಸವಲಿಂಗಯ್ಯ(ಡ್ರೈವಿಂಗ್ ಸ್ಕೂಲ್), ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




