Ad imageAd image

ಲಯನ್ಸ್ ಇಂದ ಬಾಂದವ್ಯದ ಬೆಸುಗೆ ಜೊತೆಗೆ ಸೇವೆ : ತಹಸೀಲ್ದಾರ್ ಕುಂಞ ಅಹಮದ್

Bharath Vaibhav
ಲಯನ್ಸ್ ಇಂದ ಬಾಂದವ್ಯದ ಬೆಸುಗೆ ಜೊತೆಗೆ ಸೇವೆ : ತಹಸೀಲ್ದಾರ್ ಕುಂಞ ಅಹಮದ್
WhatsApp Group Join Now
Telegram Group Join Now

ತುರುವೇಕೆರೆ: ಸಮಾಜದಲ್ಲಿ ಸಾಮರಸ್ಯ, ಬ್ರಾತೃತ್ವ ಭಾವನೆಯನ್ನು ಬೆಸೆಯುವುದರ ಜೊತೆಗೆ ನಿಸ್ವಾರ್ಥತೆಯಿಂದ ಸೇವೆಯನ್ನು ಒದಗಿಸುತ್ತಿರುವ ಲಯನ್ಸ್ ಸೇವಾ ಕಾರ್ಯ ಶ್ಲಾಘನೀಯ ಎಂದು ತಹಸೀಲ್ದಾರ್ ಕುಂಞ ಅಹಮದ್ ತಿಳಿಸಿದರು.

ಪಟ್ಟಣದ ಚೌದ್ರಿ ಕನ್ವೆಂಶನ್ ಹಾಲ್ ನಲ್ಲಿ ತುರುವೇಕೆರೆ ಲಯನ್ಸ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ 2025-26 ನೇ ಸಾಲಿನ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, 1917 ರಂದು ಚಿಕಾಗೋದಲ್ಲಿ ಮೆಲ್ವಿನ್ ಜೋನ್ಸ್ ಅವರಿಂದ ಸ್ಥಾಪನೆಯಾದ ಸಂಸ್ಥೆ ವಸುದೈವ ಕುಟುಂಬಕಂ ಎಂಬ ಮಾತಿನಂತೆ ಮಾನವ ಸಮುದಾಯವನ್ನು ಒಗ್ಗೂಡಿಸುವುದು, ವ್ಯಾಪಾರೀ ಮನೋಭಾವವಿಲ್ಲದೆ ಸರ್ವರಿಗೂ ಸೇವೆಯನ್ನು ಒದಗಿಸಬೇಕು ಎಂಬ ಧ್ಯೇಯೋದ್ದೇಶಗಳನ್ನು ಹೊಂದಿದೆ. ನಾಗರೀಕರಿಗೆ ಆರೋಗ್ಯ ಸೇವೆ, ನೇತ್ರ ತಪಾಸಣೆಯ ಮೂಲಕ ದೃಷ್ಟಿಭಾಗ್ಯ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಪರಿಸರ ಸಂರಕ್ಷಣೆ, ಬಡವರು, ಅಶಕ್ತರು, ಅಸಹಾಯಕರಿಗೆ ಅಗತ್ಯ ನೆರವನ್ನು ಒದಗಿಸುತ್ತಿರುವುದಲ್ಲದೆ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವ ಉದ್ದೇಶದಿಂದ ಸ್ವ ಉದ್ಯೋಗ ತರಬೇತಿಗಳನ್ನು ನೀಡಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಂಸ್ಥೆ ನೆರವಾಗುತ್ತಿದೆ ಎಂದರು.

ಪ್ರಾಕೃತಿಕ ವಿಕೋಪದ ಸಂದರ್ಭಗಳಲ್ಲಿ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಸ್ವಯಂ ಸೇವಕರಂತೆ ವಿಕೋಪದಲ್ಲಿ ಸಂತ್ರಸ್ತರಾದವರ ನೆರವಿಗೆ ಧಾವಿಸಿದ್ದಾರೆ, ರಕ್ತದಾನ ಮಾಡಿ ಸಾಕಷ್ಟು ಮಂದಿಯ ಜೀವ ಉಳಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಮನೆಯಿಂದ ಹೊರಬರಲು ಭಯಪಡುವ ಸಂದರ್ಭದಲ್ಲೂ ಲಯನ್ಸ್ ಸಂಸ್ಥೆ ಕೊರೊನಾ ವಾರಿಯರ್ ಆಗಿ ಆಹಾರ, ಔಷಧಿ ಸರಬರಾಜು ಮಾಡಿ ಕೊರೊನಾ ಪೀಡಿತರಿಗೆ ನೆರವಾಗಿದೆ ಎಂದ ಅವರು, ಪ್ರಸ್ತುತ ಗ್ರಾಮೀಣ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ನೀಡುತ್ತಾ, ಸಹಸ್ರಾರು ಮಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಿಸಿ ದೃಷ್ಟಿ ಭಾಗ್ಯ ನೀಡುತ್ತಿರುವ ಸಂಸ್ಥೆಯ ಕಾರ್ಯ ಅಭಿನಂದನಾರ್ಹ ಎಂದರು.

ಲಯನ್ಸ್ ಕ್ಲಬ್ ಮಾಜಿ ಜಿಲ್ಲಾ ರಾಜ್ಯಪಾಲ ಲ||ಪಿ.ಆರ್.ಎಸ್. ಚೇತನ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಹೆಚ್.ಎನ್. ಪರಮೇಶ್ವರಯ್ಯ, ಕಾರ್ಯದರ್ಶಿಯಾಗಿ ಡಾ.ಎ.ನಾಗರಾಜ್, ಖಜಾಂಚಿಯಾಗಿ ಸುನಿಲ್ ಕುಮಾರ್, ಇನ್ನಿತರ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಸೇನೆಯಲ್ಲಿ 17 ವರ್ಷ ಕಾಲ ಹವಾಲ್ದಾರ್ ಆಗಿ ಸೇವೆ ಸಲ್ಲಿಸಿದ ನಿವೃತ್ತ ಯೋಧ ಡಿ.ಹೊಸಹಳ್ಳಿಯ ಹೆಚ್.ಎನ್. ದಯಾನಂದ ಅವರನ್ನು ಸನ್ಮಾನಿಸಲಾಯಿತು.

ಬೆಳಿಗ್ಗೆ ನಡೆದ ಸೇವಾ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್, ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ದಿ.ಜಯಲಕ್ಷ್ಮಮ್ಮ, ದಿ.ನಂಜುಂಡಯ್ಯ ಸ್ಮರಣಾರ್ಥ ರಕ್ತದೊತ್ತಡ, ಶುಗರ್, ಹೆಚ್.ಬಿ.ಎ.1ಸಿ., ಬೋನ್ ಮಿನರಲ್ ಡೆನ್ಸಿಟಿ ಹಾಗೂ ಥೈರಾಯಿಡ್ ಪ್ರೊಪೈಲ್ ಉಚಿತ ತಪಾಸಣಾ ಶಿಬಿರದಲ್ಲಿ ಸುಮಾರು 500 ಕ್ಕೂ ಅಧಿಕ ಮಂದಿ ತಪಾಸಣೆ ಮಾಡಿಸಿಕೊಂಡರು. ಸಂಜೆ ಸಮಾರಂಭದಲ್ಲಿ ಲಯನ್ಸ್ ಪ್ರಾಂತ್ಯಾಧ್ಯಕ್ಷ ರಾಜೇಶ್, ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಧನಪಾಲ್, ಉಪಾಧ್ಯಕ್ಷರಾದ ಸುನಿಲ್ ಬಾಬು, ರುದ್ರಯ್ಯ ಹಿರೇಮಠ, ಸ್ವಾಗತ ಸಮಿತಿ ಅಧ್ಯಕ್ಷ ಕೈಲಾಸಂ, ಗಂಗಾಧರ ದೇವರಮನೆ, ರಾಮಕೃಷ್ಣ, ಸುರೇಶ್ ಸೇರಿದಂತೆ ಲಯನ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!