ತುರುವೇಕೆರೆ: ವೀರಶೈವ ಲಿಂಗಾಯಿತರು ನಿಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಸಲುವಾಗಿ ಹೋರಾಟ ಮಾಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಆಯೋಜಿಸಿದ್ದ ತಾಲೂಕು ವೀರಶೈವ ಲಿಂಗಾಯಿತ ನೌಕರರ ಸಮಾವೇಶ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಧರ್ಮದ ನಡುವಿನ ತಾರತಮ್ಯ ಹೋಗಲಾಡಿಸಿ ಸಮಾಜ ಸುಧಾರಣೆಗೆ ಬದುಕನ್ನು ಮೀಸಲಿಟ್ಟ ಬಸವಣ್ಣನವರ ಅನುಯಾಯಿಗಳಾದ ವೀರಶೈವ ಲಿಂಗಾಯಿತ ಸಮುದಾಯ ಇಂದು ಸಮುದಾಯವನ್ನು ಒಡೆದು ಹಾಕಲು ಹುನ್ನಾರ ನಡೆಸುತ್ತಿರುವವರ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಕಳೆದ 15 ವರ್ಷ (ಮೂರು ಬಾರಿ) ಶಾಸಕನಾದ ಸಂದರ್ಭದಲ್ಲಿ ತಾಲೂಕಿನ ದಂಡಿನಶಿವರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸಲು ಸಾಧ್ಯವಾಗಿರಲ್ಲ. ಆದರೆ ಈ ಬಾರಿ ವೀರಶೈವ ಲಿಂಗಾಯಿತ ಸಮುದಾಯ ಹೆಚ್ಚಿರುವ ದಂಡಿನಶಿವರ ಹೋಬಳಿಗೆ ಸುಮಾರು 12 ಕೋಟಿ ರೂ ಅನುದಾನ ಒದಗಿಸಿ ಅಭಿವೃದ್ಧಿ ಮಾಡಲಾಗುವುದು. ಇದಲ್ಲದೆ ಗುರುಸಿದ್ದರಾಮೇಶ್ವರ ಸಮುದಾಯ ಭವನದ ಆವರಣದಲ್ಲಿ ಹೈಮಾಸ್ಟ್ ದೀಪಕ್ಕೆ 15 ಲಕ್ಷ, ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕೆ 20 ಲಕ್ಷ ಒಟ್ಟು 35 ಲಕ್ಷ ಅನುದಾನ ಒದಗಿಸಲಾಗುವುದು. ಇದಲ್ಲದೆ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುವ ಭರವಸೆ ನೀಡಿದರು.
ಚಿಕ್ಕನಾಯಕನಹಳ್ಳಿ ತಾಲೂಕು ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಸಮಾಜಕ್ಕೆ ಮಠ ದಿಕ್ಸೂಚಿಯಾಗಿದ್ದು,ಮಠ ಮತ್ತು ಸಮಾಜ ಎರಡೂ ಹೊಂದಿಕೊಂಡು ಹೋದಾಗ ಮಾತ್ರ ಸಮಾಜ ಅಭಿವೃದ್ಧಿಯಾಗುತ್ತದೆ ಎಂದರು.
ವೀರಶೈವ ಲಿಂಗಾಯಿತ ಸಮುದಾಯದವರು ಶೈಕ್ಷಣಿಕವಾಗಿ, ರಾಜಕೀಯವಾಗಿ ಪ್ರಬಲರಾಗಬೇಕಿದೆ. ಸಂಘಟನಾತ್ಮಕವಾಗಿ ಬಲಿಷ್ಠವಾದರೆ ಸರ್ಕಾರವೇ ನಮ್ಮ ಬಳಿ ಹುಡುಕಿಕೊಂಡು ಬರುತ್ತದೆ. ಆಗ ನಮ್ಮ ಹಕ್ಕನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ವಿರಕ್ತ ಮಠದ ಕಿರಿಯ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿದ್ದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನಿವೃತ್ತ ನೌಕರರನ್ನು ಗೌರವಿಸಲಾಯಿತು. ವಿವಿಧ ಸಂಘ ಸಂಸ್ಥೆಗಳಿಗೆ ಆಯ್ಕೆಯಾದ ಸಮಾಜದ ನೌಕರರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪರಶಿವಮೂರ್ತಿ ವಹಿಸಿದ್ದರು. ಬಿಇಒ ಸೋಮಶೇಖರ್, ಕೆವಿಎಲ್ ಎಂಪ್ಲಾಯೀಸ್ ಕೋ ಆಪರೇಟೀವ್ ಸೊಸೈಟಿ ಉಪಾಧ್ಯಕ್ಷ ಸೋಮಶೇಖರ್, ನಿರ್ದೇಶಕ ಗಂಗಪ್ಪ ಎಸ್.ಹೊಂಬಳ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ, ಸರ್ಕಾರಿ ನೌಕರರ ಸಂಘದ ಪರಿಷತ್ ಸದಸ್ಯ ಎಂ.ಬಿ.ಲೋಕೇಶ್, ವೀರಶೈವ ಲಿಂಗಾಯಿತ ನೌಕರರ ಸಂಘದ ಉಪಾಧ್ಯಕ್ಷ ಗುರುರಾಜ್, ಖಜಾಂಚಿ ಲೋಕೇಶ್ ಕುಮಾರ್, ಪಪಂ ಸದಸ್ಯೆ ಆಶಾರಾಜಶೇಖರ್, ಮುಖಂಡರಾದ ಮೃತ್ಯುಂಜಯ, ವಕೀಲ ನಾಗೇಶ್, ಹೆಡಗೀಹಳ್ಳಿ ವಿಶ್ವನಾಥ್, ವೀರೇಂದ್ರ ಪಾಟೀಲ್ ಸೇರಿದಂತೆ ಸಮುದಾಯದ ಬಾಂದವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




