ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿ ಅಮ್ಮಸಂದ್ರ ಗ್ರಾಮ ಪಂಚಾಯ್ತಿಯಲ್ಲಿ ಕಂದಾಯ ವಸೂಲಾತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು, ಪಂಚಾಯ್ತಿ ಸಿಬ್ಬಂದಿ ವರ್ಗ ಪಂಚಾಯ್ತಿ ವ್ಯಾಪ್ತಿಯ ಪ್ರತಿ ಹಳ್ಳಿಗಳ ಬೀದಿಬೀದಿಗಳಿಗೆ ತೆರಳಿ ಕಂದಾಯ ಪಾವತಿಸುವಂತೆ ಮನವಿ ಮಾಡಿದರು.

ಗ್ರಾಪಂ ಸದಸ್ಯ ಸಿದ್ದಗಂಗಣ್ಣ ಮಾತನಾಡಿ, ಅಮ್ಮಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೆ ಮೂಲಸೌಕರ್ಯ ಒದಗಿಸಲು ತೆರಿಗೆ ಆದಾಯದ ಮೂಲವಾಗಿದೆ. ಗ್ರಾಮಸ್ಥರುಗಳು ಪಂಚಾಯ್ತಿಗೆ ಕಟ್ಟಬೇಕಾದ ತೆರಿಗೆಯನ್ನು ಸಕಾಲದಲ್ಲಿ ಪಾವತಿಸಿದರೆ ಗ್ರಾಮಗಳಿಗೆ ಅಗತ್ಯ ನೀರು, ವಿದ್ಯುತ್ ಸೇರಿದಂತೆ ಮೂಲಸೌಕರ್ಯ ಒದಗಿಸಲು ಸಾಧ್ಯವಾಗುತ್ತದೆ. ಪಂಚಾಯ್ತಿಯು ಶೇ.೮೦ರಷ್ಟು ಕಂದಾಯ ವಸೂಲು ಮಾಡದಿದ್ದರೆ ಸರ್ಕಾರ ನೋಟೀಸ್ ಸಹ ನೀಡುತ್ತದೆ. ಈಗ ಸರ್ಕಾರದ ಆದೇಶದಂತೆ ಪ್ರತಿಯೊಬ್ಬ ನಾಗರೀಕರು ಕಂದಾಯ ಪಾವತಿಸುವಂತೆ ಮನವಿ ಮಾಡುವ ನಿಟ್ಟಿನಲ್ಲಿ ಅಮ್ಮಸಂದ್ರ ಪಂಚಾಯ್ತಿ ವತಿಯಿಂದ ಕಂದಾಯ ವಸೂಲಾತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ ಏಕೈಕ ಕಾರ್ಖಾನೆಯಾಗಿರುವ ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆಯು ಕಳೆದ ಮೂರೂವರೆ ವರ್ಷದಿಂದ ಗ್ರಾಮ ಪಂಚಾಯ್ತಿಗೆ ಯಾವುದೇ ತೆರಿಗೆ ಪಾವತಿ ಮಾಡಿಲ್ಲ. ಈಗಾಗಲೇ ಕಾರ್ಖಾನೆಯ ಮೆಷಿನರಿಗಳನ್ನು ಮಾರಾಟ ಮಾಡುತ್ತಿದ್ದಾರೆ, ಕಾರ್ಖಾನೆ ಸಂಪೂರ್ಣವಾಗಿ ಮುಚ್ಚುವ ಹಂತ ತಲುಪಿದೆ. ಪ್ರತಿ ಆರು ತಿಂಗಳಿಗೊಮ್ಮೆ ಕಾರ್ಖಾನೆಯ ಆಡಳಿತ ಮಂಡಳಿ ಬದಲಾಗುತ್ತದೆ. ಕಂದಾಯ ಮಾತ್ರ ಪಾವತಿಸುತ್ತಿಲ್ಲ, ಈ ಹಿನ್ನೆಲೆ ಆಡಳಿತ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನ್ಯಾಯಾಲಯಕ್ಕೆ ತೆರಳಿತ್ತು. ಅಲ್ಲಿ ಕೆಲವು ಬದಲಾವಣೆ ಮಾಡಿ ಕಂದಾಯ ಪಾವತಿಸುವಂತೆ ಆಡಳಿತ ಮಂಡಳಿಗೆ ಸೂಚಿಸಲಾಗಿತ್ತು. ಆದರೂ ಕಾರ್ಖಾನೆಯವರು ಕಂದಾಯ ಪಾವತಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕಾರ್ಖಾನೆಗೆ ಪಂಚಾಯ್ತಿಯ ತೆರಿಗೆ ಕಟ್ಟುವ ಇಚ್ಛೆಯಿಲ್ಲ. ತೆರಿಗೆ ವಂಚಿಸಿ ಕಾರ್ಖಾನೆ ಮುಚ್ಚಿ ಹೋಗುವ ಹುನ್ನಾರವನ್ನು ನಡೆಸಿದೆ ಎಂದು ಆರೋಪಿಸಿದರು.
ಇದಲ್ಲದೆ ಸ್ಥಳೀಯ ಬೆಸ್ಕಾಂ ಸಹ ಪಂಚಾಯ್ತಿಗೆ ಹೆಚ್ಚಿನ ತೆರಿಗೆ ಪಾವತಿ ಮಾಡಬೇಕು. ಬೆಸ್ಕಾಂನ ಅಧಿಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ತಿಳಿಸಿದರೂ ತೆರಿಗೆ ಪಾವತಿಸುವ ಗೋಜಿಗೇ ಹೋಗಿಲ್ಲ. ಸಿಮೆಂಟ್ ಕಾರ್ಖಾನೆ ಹಾಗೂ ಬೆಸ್ಕಾಂನಿಂದಲೇ ಲಕ್ಷಾಂತರ ರೂ ತೆರಿಗೆ ಬಾಕಿ ಪಂಚಾಯ್ತಿಗೆ ಬರಬೇಕಿದೆ. ತೆರಿಗೆ ಹಣ ಪಾವತಿಯಾಗದಿದ್ದರೆ ಪಂಚಾಯ್ತಿಯ ಹಳ್ಳಿಗಳಲ್ಲಿ ಅಭಿವೃದ್ದಿ ಕೆಲಸಗಳನ್ನು ನಡೆಸುವುದಾದರೂ ಹೇಗೆ? ಜನರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದಾದರೂ ಹೇಗೆ? ಎಂದು ಪ್ರಶ್ನಿಸಿದ ಅವರು, ಕೂಡಲೇ ಕಾರ್ಖಾನೆ ಹಾಗೂ ಬೆಸ್ಕಾಂ ಪಂಚಾಯ್ತಿಗೆ ಪಾವತಿಸಬೇಕಾದ ತೆರಿಗೆ ಹಣ ಪಾವತಿ ಮಾಡದಿದ್ದಲ್ಲಿ ಪಂಚಾಯ್ತಿಯ ಅಧ್ಯಕ್ಷ, ಸದಸ್ಯರುಗಳು ಕಾರ್ಖಾನೆ ಹಾಗೂ ಬೆಸ್ಕಾಂ ಎದುರು ಧರಣಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಕಂದಾಯ ವಸೂಲಾತಿ ಅಭಿಯಾನದಲ್ಲಿ ಗ್ರಾಪಂ ಅಧ್ಯಕ್ಷ ಗಂಗಾಧರಯ್ಯ, ಉಪಾಧ್ಯಕ್ಷೆ ಪಲ್ಲವಿ, ಸದಸ್ಯರಾದ ಸಿದ್ದಗಂಗಯ್ಯ, ಸರೋಜಮ್ಮ, ಸಿದ್ದಗಂಗಮ್ಮ, ಶಿವರಾಜು, ವರಲಕ್ಷ್ಮೀ, ಪದ್ಮ, ಉಮೇಶ್, ಗಂಗಯ್ಯ ಸೇರಿದಂತೆ ಪಂಚಾಯ್ತಿ ಅಧಿಕಾರಿಗಳು, ಸಿಬ್ಬಂದಿ, ನೌಕರ ವರ್ಗ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




