ಒತ್ತಡ ಮುಕ್ತ ಜೀವನಶೈಲಿಯಿಂದ ಆರೋಗ್ಯ ಭಾಗ್ಯ: ಡಾ.ಚೌದ್ರಿನಾಗೇಶ್
ತುರುವೇಕೆರೆ : ಪಟ್ಟಣದ ಚೌದ್ರಿ ಕನ್ವೆಂಶನ್ ಹಾಲ್ ನಲ್ಲಿ ರೋಟರಿ ಕ್ಲಬ್, ಇನ್ನರ ವೀಲ್ ಕ್ಲಬ್ ಆಫ್ ಸಂಕಲ್ಪ, ಚೌದ್ರಿ ಹಾಸ್ಪಿಟಲ್, ಬೆಂಗಳೂರಿನ ಪ್ರಕ್ರಿಯ ಹಾಸ್ಪಿಟಲ್, ಕಲ್ಪಸಿರಿ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಬಿರ ಉದ್ಘಾಟಿಸಿ ಮಾತನಾಡಿದ ವೈದ್ಯ ಡಾ.ಚೌದ್ರಿ ನಾಗೇಶ್, ಪ್ರಸ್ತುತ ಸಮಾಜದಲ್ಲಿ ಎಲ್ಲರೂ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದು, ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸುತ್ತಿಲ್ಲ. ಕೊರೊನಾ ನಂತರ ಜನರಲ್ಲಿ ಆರೋಗ್ಯ ಜಾಗೃತಿ ಹೆಚ್ಚಾಗಿದೆ. ಇತ್ತೀಚೆಗೆ ಹೃದಯಾಘಾತದಿಂದ ಮರಣ ಹೊಂದುತ್ತಿರುವ ಸಂಖ್ಯೆಗಳು ಹೆಚ್ಚಾಗಿದ್ದು, ಇದಕ್ಕೆ ಒತ್ತಡದ ಬದುಕು, ಜೀವನಶೈಲಿಯೇ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಾಗರೀಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ಆಗಿಂದಾಗ್ಗೆ ತಮ್ಮ ದೇಹದ ಆರೋಗ್ಯ ಹೇಗಿದೆ ಎಂಬುದನ್ನು ತಜ್ಞ ವೈದ್ಯರ ಬಳಿ ತೆರಳಿ ಅಥವಾ ರೋಟರಿ ಸೇರಿದಂತೆ ಸಂಘ ಸಂಸ್ಥೆಗಳು ನಡೆಸುವ ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಪರೀಕ್ಷಿಸಿಕೊಳ್ಳಬೇಕು. ದೇಹದ ಆರೋಗ್ಯ ತೀರಾ ಹದಗೆಟ್ಟ ಪರಿಸ್ಥಿತಿಯಲ್ಲಿ ವೈದ್ಯರ ಬಳಿ ಬಂದರೆ ಆಗ ಯಾರೂ ಸಹ ಆರೋಗ್ಯ ಭಾಗ್ಯ ನೀಡಲು ಸಾಧ್ಯವಾಗುವುದಿಲ್ಲ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಬಿಎಂಎಸ್ ಉಮೇಶ್ ಮಾತನಾಡಿ, ರೋಟರಿ ಸಂಸ್ಥೆ ಕಳೆದೊಂದು ದಶಕದಿಂದ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸೇವೆಯನ್ನು ಜನರಿಗೆ ಒದಗಿಸುತ್ತಾ ಬಂದಿದೆ. ಹತ್ತಾರು ಆರೋಗ್ಯ ಶಿಬಿರಗಳ ಮೂಲಕ ಗ್ರಾಮೀಣ ಜನರಿಗೆ ಮನೆಬಾಗಿಲಿಗೆ ಆರೋಗ್ಯ ಒದಗಿಸುವ ನಿಟ್ಟಿನಲ್ಲಿ ತನ್ನದೇ ಆದ ಕಾರ್ಯಯೋಜನೆಗಳೊಂದಿಗೆ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯರನ್ನು ತುರುವೇಕೆರೆಗೆ ಕರೆಯಿಸಿ ಅವರಿಂದ ತಪಾಸಣೆ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ಒದಗಿಸುತ್ತಿದೆ. ಇಂದೂ ಸಹ ಬೆಂಗಳೂರಿನ ಪ್ರಕ್ರಿಯ ಹಾಸ್ಪಿಟಲ್ ನ ತಜ್ಞ ವೈದ್ಯರುಗಳು ಆಗಮಿಸಿದ್ದು ನಾಗರೀಕರು ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.
ಸಮಾರಂಭದಲ್ಲಿ ನೂರಾರು ನಾಗರೀಕರು ಬಿಪಿ, ಶುಗರ್, ಇಸಿಜಿ, ಎಕೋ, ಥೈರಾಯಿಡ್ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಪ್ರಕ್ರಿಯ ಹಾಸ್ಪಿಟಲ್ ನ ವೈದ್ಯರಾದ ಡಾ.ಅಶ್ವಿನ್ ಕುಮಾರ್, ಡಾ.ಚೈತನ್ಯ, ಡಾ.ಶ್ರೀಧರ್, ಡಾ.ಮಂಜುನಾಥ್, ಡಾ.ಸಚಿನ್, ಡಾ.ಅರ್ಪಿತಾ, ಡಾ.ಉದಯ್, ಪ್ರಾದೇಶಿಕ ವ್ಯವಸ್ಥಾಪಕ ಗೌರೀಶಂಕರ್, ಪಪಂ ಸದಸ್ಯರಾದ ಅಂಜನ್ ಕುಮಾರ್, ಆಶಾರಾಜಶೇಖರ್, ರೋಟರಿ ಕ್ಲಬ್ ಖಜಾಂಚಿ ಸುನಿಲ್, ಪದಾಧಿಕಾರಿಗಳಾದ ಅಭಿನೇತ್ರಿ ನರಸಿಂಹಮೂರ್ತಿ, ಜೀಲನ್, ಉಪೇಂದ್ರ, ಇನ್ನರ್ ವೀಲ್ ಅಧ್ಯಕ್ಷೆ ಇಂದಿರಾಪ್ರಭಾಕರ್, ಸಂಸ್ಥಾಪಕ ಅಧ್ಯಕ್ಷೆ ಗೀತಾಸುರೇಶ್, ಸುವರ್ಣಮ್ಮ, ಲತಾ, ಸವಿತ, ರಶ್ಮ, ರೇಖಾ, ಮಧು, ಹಂಸ, ಭಾಗ್ಯ, ರಾಧ, ಗಾಯತ್ರಿ, ಆನಂದಮದನ್ ಸೇರಿದಂತೆ ನಾಗರೀಕರು ಉಪಸ್ಥಿತರಿದ್ದರು.
ವರದಿ : ಗಿರೀಶ್ ಕೆ ಭಟ್




