ಬೆಂಗಳೂರು: ರಾಜ್ಯದಲ್ಲಿ ಸಣ್ಣ ವ್ಯಾಪಾರಿಗಳ ಮೇಲೆ ಹಾಗೂ ಬೀದಿಬದಿ ವ್ಯಾಪಾರಿಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ಕೊಟ್ಟಿದ್ದು, ಸಿಎಂ ಸಿದ್ದರಾಮಯ್ಯ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ಕೊಡಿಸಿ, ವಸೂಲಿ ಮಾಡುತ್ತಿದ್ದಾರೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಆರೋಪ ಮಾಡಿದ್ದಾರೆ.
ವ್ಯಾಪಾರಿಗಳ ಹೋರಾಟಕ್ಕೆ ಬಿಜೆಪಿ ಬೆಂಬಲವಿದೆ
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಇಲಾಖೆ ನೋಟಿಸ್ ಕಳುಹಿಸಿರುವುದು ಸರಿಯಲ್ಲ. ಈ ರೀತಿ ತೆರಿಗೆ ಇಲಾಖೆ ಮೂಲಕ ಸಿಎಂ ಸಿದ್ದರಾಮಯ್ಯ ವಸೂಲಿಗೆ ಇಳಿದಿದ್ದಾರೆ. ಸಣ್ಣ ವ್ಯಾಪಾರಿಗಳು ಮಾಡುತ್ತಿರುವ ಹೋರಾಟಕ್ಕೆ ಬಿಜೆಪಿ ಸಂಪೂರ್ಣವಾಗಿ ಬೆಂಬಲ ನೀಡಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ರಾಜ್ಯ ಸರ್ಕಾರದ ಮುಖ್ಯ ಮಂತ್ರಿಗಳು ಹಾಗೂ ಇತರ ಸಚಿವರು ಕೇಂದ್ರ ಸರ್ಕಾರದ ಮೇಲೆ ಬೆಟ್ಟು ತೋರಿಸುತ್ತಿದ್ದಾರೆ.
ಆದರೆ ಇದು ರಾಜ್ಯ ಸರ್ಕಾರದ ಕೆಲಸ. ಮುಖ್ಯವಾಗಿ ಜಿಎಸ್‍ಟಿ ವ್ಯವಸ್ಥೆಯಲ್ಲಿ 3 ಸ್ಲ್ಯಾಬ್‍ಗಳಿದ್ದು, ಹಾಲು ಮತ್ತಿತರ ಕೆಲ ವಸ್ತುಗಳು ಜಿಎಸ್‍ಟಿ ವ್ಯಾಪ್ತಿಗೆ ಬರುವುದಿಲ್ಲ, ಆದರೂ ಸಹ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟಿದ್ದಾರೆ.
ಎಲ್ಲರಿಗೂ ವಾಣಿಜ್ಯ ತೆರಿಗೆ ಇಲಾಖೆಯು ಶೇ.18 ರಷ್ಟು ತೆರಿಗೆ ಪಾವತಿಗೆ ನೋಟಿಸ್ ಕೊಡುತ್ತಿದೆ. ಖಜಾನೆ ಖಾಲಿ ಆಗಿದೆ ಹಾಗಾಗಿ ಯಾವುದರ ಬಗ್ಗೆಯೂ ಗಮನಕೊಡದೇ ವ್ಯಾಪಾರಿಗಳಿಗೆ ಸಮಸ್ಯೆ ಮಾಡುತ್ತಿದ್ದಾರೆ. ಇದರಿಂದ ವ್ಯಾಪಾರಿಗಳು ಆತಂಕಗೊಂಡಿದ್ದಾರೆ. ರಾಜ್ಯ ಸರ್ಕಾರ ತಕ್ಷಣವೇ ಈ ನಿರ್ಧಾರವನ್ನ ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಬೇಕರಿ, ಪಾನ್ ಶಾಪ್ ಮತ್ತು ಸಣ್ಣ ಕಿರಾಣಿ ವರ್ತಕರ ಅಂಗಡಿಗಳಿಗೆ ತೆರಿಗೆ ನೋಟಿಸ್ ಜಾರಿ ಮಾಡಿರುವುದನ್ನು ವಿರೋಧಿಸಿ ಜು. 25 ಕ್ಕೆ ರಾಜ್ಯಾದ್ಯಂತ ಬೇಕರಿ ಮಾಲಿಕರು ಮುಷ್ಕರಕ್ಕೆ ಕರೆ ನೀಡಿದ್ದರು.
ಕೋಟಿ ಕೋಟಿ ಕಾಳಧನ ಹೊಂದಿರುವ ಸಿರಿವಂತರನ್ನು ಬಿಟ್ಟು ಬಡ ವ್ಯಾಪಾರಿಗಳನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಸಣ್ಣ ವರ್ತಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇಷ್ಟು ದಿನ 1 ರೂ. ಗಳಿಂದ ಹಿಡಿದು ಸಾವಿರಾರು ರೂ. ಗಳವರೆಗೆ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಮತ್ತಿತರ ಅಪ್ಲಿಕೇಶನ್ ಮೂಲಕ ಹಣ ಸ್ವೀಕರಿಸುತ್ತಿದ್ದ ವರ್ತಕರು ಈಗ ತಮಗೆ ನಗದು ಹಣವನ್ನೇ ಪಾವತಿಸುವಂತೆ ಗ್ರಾಹಕರನ್ನು ಒತ್ತಾಯಿಸುತ್ತಿದ್ದಾರೆ.
ವರ್ತಕರಿಗೆ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿರುವುದಕ್ಕೆ ಬೆಂಗಳೂರಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಎಚ್ಚೆತ್ತಿರೋ ವಾಣಿಜ್ಯ ಇಲಾಖೆ ವರ್ತಕರ ಕೋಪ ತಣ್ಣಗಾಗಿಸಲು ಮುಂದಾಗಿತ್ತು.
ವಾಣಿಜ್ಯ ಇಲಾಖೆ ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿದೆ.ವರ್ತಕರು ನೋಟಿಸ್ ಬಂದಿರುವ ಕಚೇರಿಗೆ ತೆರಳಿ ಸೂಕ್ತ ದಾಖಲಾತಿ ನೀಡಿ ವಿವರಣೆ ನೀಡಬೇಕು. ಇದ್ರಿಂದ ತೆರಿಗೆ ವಿನಾಯಿತಿ ಇರುವ ಸರಕು ಸೇವೆಗಳನ್ನು ಹೊರತುಪಡಿಸಿ, ತೆರಿಗೆ ಇರುವ ಸರಕಿಗೆ ಮಾತ್ರ ತೆರಿಗೆ ವಿಧಿಸುತ್ತಾರೆ ಎಂದಿದೆ.




