Ad imageAd image

ಕೌಶಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡದಿದ್ದರೆ ದೇಶದ ಅಭ್ಯುದಯ ಸಾಧ್ಯವಿಲ್ಲ : ಡಾ.ಎ.ನಾಗರಾಜ್

Bharath Vaibhav
ಕೌಶಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡದಿದ್ದರೆ ದೇಶದ ಅಭ್ಯುದಯ ಸಾಧ್ಯವಿಲ್ಲ : ಡಾ.ಎ.ನಾಗರಾಜ್
WhatsApp Group Join Now
Telegram Group Join Now

ತುರುವೇಕೆರೆ: ವಿಶ್ವದ ಚೀನಾ, ಜಪಾನ್ ದೇಶಗಳಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಆದರೆ ನಮ್ಮ ಭಾರತ ದೇಶದಲ್ಲಿ ಇನ್ನೂ ಹಳೆಯ ಶಿಕ್ಷಣ ಪದ್ದತಿಯನ್ನೇ ಮುಂದುವರೆಸಲಾಗುತ್ತಿದೆ. ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡದೆ ಹೋದರೆ ದೇಶದ ಅಭ್ಯುದಯ ಸಾಧ್ಯವಿಲ್ಲ ಎಂದು ಹಿರಿಯ ವೈದ್ಯ ಡಾ.ಎ.ನಾಗರಾಜ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಆಡಳಿತ, ಜಿಲ್ಲಾ ಮತ್ತು ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಲಯನ್ಸ್ ಕ್ಲಬ್, ವಕೀಲರ ಸಂಘ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಿನ ವಿದ್ಯಾರ್ಥಿಗಳು ಕಲಿಯುವ ಪದವಿ, ತಾಂತ್ರಿಕ ಶಿಕ್ಷಣದಿಂದ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ. ಹಳೆಯ ಶಿಕ್ಷಣ ಪದ್ದತಿಯನ್ನು ಬದಿಗಿರಿಸಿ ಕೌಶಲ್ಯಾಧಾರಿತ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದಲೇ ನೀಡಬೇಕಿದೆ ಎಂದರು.

ದೇಶದಲ್ಲಿ ವಾರ್ಷಿಕ ಸುಮಾರು 80ಲಕ್ಷಕ್ಕೂ ಅಧಿಕ ಕಾಲೇಜಿನಿಂದ ಹೊರಬರುತ್ತಿದ್ದಾರೆ. ಈ ಪೈಕಿ 10 ಲಕ್ಷ ಮಂದಿ ಉದ್ಯೋಗ ಪಡೆದರೆ, ಮತ್ತೆ 10 ಲಕ್ಷ ಜನ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಉಳಿದ 60 ಲಕ್ಷ ಪದವೀಧರರ ಕಥೆ ಏನು? ಎಂಬ ಅಂಕಿ ಅಂಶ ಗೊತ್ತಿಲ್ಲದಾಗಿದೆ. ಆ 60 ಲಕ್ಷ ಮಂದಿ ಉದ್ಯೋಗ ಸಿಗದೆ, ಬಡತನ, ಕೌಟುಂಬಿಕ ಪರಿಸ್ಥಿತಿಗಳಿಗೆ ಬೇಸತ್ತು ಅಂಡರ್ ವರ್ಲ್ಡ್, ಮಾಫಿಯಾ ಚಟುವಟಿಕೆಗಳಲ್ಲಿ, ಮಾದಕ ವ್ಯಸನಿಗಳಾಗಿ, ಸಮಾಜಕ್ಕೆ ಹೊರೆಯಾಗಿ ಜೀವನ ಸಾಗಿಸುತ್ತಾರೆಯೇ? ಅದೂ ಅರ್ಥವಾಗದ ಪರಿಸ್ಥಿತಿ ಉಂಟಾಗಿದೆ ಎಂದರು.

ಜನಸಂಖ್ಯೆ ನಿಯಂತ್ರಣವಾಗದಿದ್ದರೆ ಮುಂದೊಂದು ದಿನ ಇಡೀ ವಿಶ್ವದಲ್ಲಿ ಮಾನವ ಸಂಪನ್ಮೂಲ ಹೆಚ್ಚಾಗಿ ಆಹಾರ, ನೀರಿಗೆ ತತ್ವಾರ ಮಾತ್ರವಲ್ಲ ಕಚ್ಚಾಟ ಏರ್ಪಡಲಿದೆ, ಬರಗಾಲ ತಾಂಡವವಾಡಲಿದೆ. ವಿಶ್ವದಲ್ಲಿ 1950 ರ ನಂತರ ಜನಸಂಖ್ಯೆ ಅತಿ ವೇಗವಾಗಿ ಬೆಳೆದಿದ್ದು, ಪ್ರಸ್ತುತ 800 ಕೋಟಿ ಜನಸಂಖ್ಯೆಯಿದೆ. ತಜ್ಞರ ವರದಿಯ ಪ್ರಕಾರ ವಿಶ್ವದ ಜನಸಂಖ್ಯೆ 2050 ರಲ್ಲಿ 900 ಕೋಟಿ, 2100 ರಲ್ಲಿ ಒಂದು ಸಾವಿರ ಕೋಟಿಯಾಗಲಿದೆ. ಜನಸಂಖ್ಯೆ ಹೆಚ್ಚಳದಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ, ಆಹಾರ, ನೀರು, ಉದ್ಯೋಗದ ಸಮಸ್ಯೆ ಉಂಟಾಗುತ್ತಿದೆ. ವಾಹನಗಳ ಸಂಖ್ಯೆ ಹೆಚ್ಚಾಗಿ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಮನೆಯ ತ್ಯಾಜ್ಯ ನೀರು ಕೆರೆ ಸೇರುತ್ತಿರುವ ಪರಿಣಾಮ ಪರಿಸರ ಮಲಿನಗೊಳುತ್ತಿದೆ. ಇದಲ್ಲದೆ ಮಾನವ ಸಂಪನ್ಮೂಲ ಬಳಕೆ ಹೇಗೆ? ಎಂಬ ಪ್ರಶ್ನೆ ಕಾಡುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಅನಂತರಾಮು ಅಧ್ಯಕ್ಷತೆ ವಹಿಸಿದ್ದರು. ವಕೀಲ ಕೆ.ಬಿ. ಶೇಖರ್ ಜನಸಂಖ್ಯಾ ದಿನದ ಬಗ್ಗೆ ಕಾನೂನಿನ ಅರಿವನ್ನು ಮೂಡಿಸಿದರು. ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ರಂಗನಾಥ್ ಜನಸಂಖ್ಯೆ ನಿಯಂತ್ರಣದ ಬಗ್ಗೆ ವೈದ್ಯಕೀಯ ಕ್ಷೇತ್ರದ ಮಾಹಿತಿ ನೀಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಪರಮೇಶ್ವರಯ್ಯ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಉಪಪ್ರಾಂಶುಪಾಲ ವೆಂಕಟೇಶ್, ಉಪನ್ಯಾಸಕರಾದ ಹರೀಶ್, ಸುಧಾಕರ್, ಆರೋಗ್ಯ ಇಲಾಖೆ ಸಿಬ್ಬಂದಿ, ಕಾಲೇಜಿನ ಬೋಧಕ ಬೋಧಕೇತರ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!