ತುರುವೇಕೆರೆ: ತಾಲ್ಲೂಕಿನ 328 ಅಂಗನವಾಡಿ ಕೇಂದ್ರಗಳಿಗೆ ಪುಟಾಣಿ ಮಕ್ಕಳ ತೋಳಿನ ಸುತ್ತಳತೆ ಕಂಡುಕೊಳ್ಳುವ ಟೇಪನ್ನು ಸ್ಥಳೀಯ ರೋಟರಿ ಕ್ಲಬ್ ವತಿಯಿಂದ ಉಚಿತವಾಗಿ ವಿತರಿಸಲಾಯಿತು.
ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಗೆ ತೆರಳಿದ ರೋಟರಿ ಕ್ಲಬ್ ಅಧ್ಯಕ್ಷ ವಿ.ಆರ್.ಉಮೇಶ್ ಅವರ ತಂಡ, ಇಲಾಖೆಯ ಮುಖ್ಯಸ್ಥರಿಗೆ ಸುತ್ತಳತೆ ಕಂಡುಕೊಳ್ಳುವ ಟೇಪನ್ನು ನೀಡಿದರು. ನಂತರ ಮಾತನಾಡಿದ ಅವರು, ತಾಲ್ಲೂಕಿನಲ್ಲಿ 328 ಅಂಗನವಾಡಿ ಕೇಂದ್ರಗಳಿದ್ದು, ಪ್ರತಿ ಅಂಗನವಾಡಿ ಕೇಂದ್ರದಲ್ಲಿ ಕನಿಷ್ಠ 15 ರಿಂದ 20 ಪುಟಾಣಿ ಮಕ್ಕಳು ನಲಿಯುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ಅಂಗನವಾಡಿ ಕಾರ್ಯಕರ್ತರು ವಹಿಸುತ್ತಿದ್ದಾರೆ. ಮಕ್ಕಳ ದೈನಂದಿನ ಬೆಳವಣಿಗೆಯ ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕಾದ ಹೊಣೆಗಾರಿಕೆಯೂ ಕಾರ್ಯಕರ್ತರದ್ದಾಗಿದೆ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಯಿಂದ ಪುಟಾಣಿ ಮಕ್ಕಳ ತೋಳಿನ ಸುತ್ತಳತೆ ಕಂಡುಕೊಳ್ಳುವ ಟೇಪ್ (ಅಳತೆ ಪಟ್ಟಿ) ಅನ್ನು ಉಚಿತವಾಗಿ ನೀಡಲಾಗಿದೆ ಎಂದರು.

ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಅಧಿಕಾರಿ ವೆಂಕಟಪ್ಪ ಮಾತನಾಡಿ, ಇದೇ ಮೊದಲ ಬಾರಿಗೆ ಸೇವಾ ಸಂಸ್ಥೆಯೊಂದು ಅಂಗನವಾಡಿ ಮಕ್ಕಳ ತೋಳಿನ ಸುತ್ತಳತೆ ಕಂಡುಕೊಳ್ಳುವ ಅಳತೆ ಪಟ್ಟಿ ನೀಡಿದ್ದು, ರೋಟರಿ ಸಂಸ್ಥೆ ಹಾಗೂ ಪದಾಧಿಕಾರಿಗಳಿಗೆ ಇಲಾಖೆ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ರೋಟರಿ ಸಂಸ್ಥೆ ಅಂತರಾಷ್ಟ್ರೀಯ ಸಂಸ್ಥೆಯಾದರೂ ಸ್ಥಳೀಯವಾಗಿ ಅಸಹಾಯಕರಿಗೆ ನೆರವು ನೀಡುತ್ತಾ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯ ಅಂಜನ್ ಕುಮಾರ್, ರೋಟರಿ ಕ್ಲಬ್ ಕಾರ್ಯದರ್ಶಿ ಪ್ರಸನ್ನಕುಮಾರ್, ಖಜಾಂಚಿ ಸುನಿಲ್, ಸಂತೋಷ್ ಸೇರಿದಂತೆ ಇಲಾಖೆಯ ನೌಕರ ವರ್ಗ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




