ಬೆಂಗಳೂರು : ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ರೂ ರೈತರ ಸಂಕಷ್ಟ ತಪ್ಪಿಲ್ಲ. ಅನೇಕ ಜಿಲ್ಲೆಗಳಲ್ಲಿ ಗೊಬ್ಬರ ಕೊರತೆ ಎದುರಾಗಿದ್ದು, ಇದೇ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ದೊಡ್ಡ ವಾಕ್ಸಮರ ಮುಂದುವರಿದಿದೆ.ಕಮಲಪಡೆ ಪ್ರೊಟೆಸ್ಟ್ಗೂ ಸಹ ಮುಂದಾಗಿದೆ.
ಬಹುತೇಕ ಜಿಲ್ಲೆಗಳಲ್ಲಿ ಗೊಬ್ಬರ ಕೊರತೆ ಎದುರಾಗಿದೆ. ರೈತರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ರೈತರ ಸಮಸ್ಯೆಗೆ ಸ್ಪಂದನೆ ಮಾಡಬೇಕಾದ ನಾಯಕರು ಇದನ್ನೇ ಅಷ್ಟ್ರವಾಗಿರಿಸಿಕೊಂಡು ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿದ್ದಾರೆ.
ಗೊಬ್ಬರ ಕೊರತೆ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ಜೋರಾಗಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದ ವಿಚಾರಕ್ಕೆ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಇತರೆ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗೊಬ್ಬರಕ್ಕಾಗಿ ಮಳೆ ಬರುವ ಮೊದಲೇ ಮೋದಿಗೆ ಪತ್ರ ಬರೆಯಬೇಕಿತ್ತು ಎಂದು ವಿಜಯೇಂದ್ರ ಸಿಎಂ ಸಿದ್ದರಾಮಯ್ಯ ಕಾಲೆಳೆದಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರುವ ಪರಮೇಶ್ವರ್, ಕೇಂದ್ರದಿಂದಲೇ ಗೊಬ್ಬರ ಪೂರೈಕೆಯಾಗಿಲ್ಲ ಎಂದು ಕೌಂಟರ್ ಕೊಟ್ಟಿದ್ದಾರೆ. ಇದಕ್ಕೆ ರೀ ಕೌಂಟರ್ ಕೊಟ್ಟ ವಿಜಯೇಂದ್ರ, ಎರಡೂವರೆ ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಎಲ್ಲಿ ಹೋಯಿತು ಎಂದು ಪ್ರಶ್ನಿಸಿ ಕೈ ನಾಯಕರ ಬದ್ಧತೆ ಪ್ರಶ್ನಿಸಿದ್ದಾರೆ.




