ತುರುವೇಕೆರೆ : ಪಟ್ಟಣದ ದಬ್ಭೇಘಟ್ಟ ರಸ್ತೆಯಲ್ಲಿ ವಿರಾಜಮಾನವಾಗಿರುವ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ಆಗಸ್ಟ್ 10 ರಿಂದ 12 ರವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ 354 ಆರಾಧನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಆಗಸ್ಟ್ 10 ರಂದು ಭಾನುವಾರ ಪೂರ್ವಾರಾಧನೆ ಪ್ರಯುಕ್ತ ಬೆಳಿಗ್ಗೆ 5 ಗಂಟೆಗೆ ಕಾಕಡಾರತಿ, ಅಷ್ಟೋತ್ತರ ಸಹಿತ ಪಮಚಾಮೃತ ಅಭಿಷೇಕ, ಮಹಾಭಿಷೇಕ, ವಸ್ತ್ರಾಲಂಕಾರ, ಕನಕಾಭಿಷೇಕ, ಹಸ್ತೋದಕ, ನೈವೇದ್ಯ ಸಮರ್ಪಣೆ, 11 ಗಂಟೆಗೆ ಪರಿಮಳಾಚಾರ್ಯ ಭಜನಾ ಮಂಡಳಿಯಿಂದ ಭಜನೆ, 12.30 ಕ್ಕೆ ಪಲ್ಲಕ್ಕಿ ಉತ್ಸವ, ರಥೋತ್ಸವ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಸಂಜೆ ಗುರುದತ್ತರಿಂದ ವೀಣಾವಾದನ, ಪ್ರಾಣೇಶ್ ಭಾರದ್ವಾಜ್ ರಿಂದ ದಾಸರ ಪದಗಳ ಗಾಯನ, ನಂತರ ಅಷ್ಟಾವಧಾನ ಸೇವೆ, ಮಂಗಳಾರತಿ ನೆರವೇರಲಿದೆ.
ಆಗಸ್ಟ್ 11 ರಂದು ಸೋಮವಾರ ಮಧ್ಯಾರಾಧನೆ ಪ್ರಯುಕ್ತ ದೇವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ನೆರವೇರಲಿದೆ. 10 ಗಂಟೆಗೆ ಧೇನುಪುರಿ ಭಜನಾ ಮಂಡಳಿಯಿಂದ ಭಜನೆ, 12 ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ 1 ಗಂಟೆಗೆ ಪಟ್ಟಣದ ವೈ.ಟಿ.ರಸ್ತೆಯಲ್ಲಿರುವ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದ ಆವರಣದಲ್ಲಿ ಸಾರ್ವಜನಿಕರಿಂದ ಸಾರ್ವಜನಿಕರಿಗೆ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದೇ ದಿನ ಸಂಜೆ 5 ಗಂಟೆಗೆ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಎಲ್ಲಾ ವಿಭಾಗದಲ್ಲಿ 2024-25 ನೇ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 7 ಗಂಟೆಗೆ ಶ್ರೀ ಶಾರದಾ ಭಜನಾ ಮಂಡಳಿಯಿಂದ ಭಜನೆ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.
ಆಗಸ್ಟ್ 12 ರಂದು ಮಂಗಳವಾರ ಉತ್ತರಾಧನೆ ಪ್ರಯುಕ್ತ ದೈನಂದಿನ ಪೂಜಾ ಕೈಂಕರ್ಯಗಳು ಎಂದಿನಂತೆ ನೆರವೇರಲಿದ್ದು, ಬೆಳಿಗ್ಗೆ 10 ಗಂಟೆಗೆ ಶ್ರೀ ಶಕ್ತಿಗಣಪತಿ ಭಜನಾ ಮಂಡಳಿಯಿಂದ ಭಜನೆ, 12 ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಸಂಜೆ 6 ಗಂಟೆಗೆ ಪಟ್ಟಣದ ರಾಜಬೀದಿಗಳಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಭಾವಚಿತ್ರ ಮೆರವಣಿಗೆ ನಡೆಸಲಾಗುವುದು. ಮೂರು ದಿನದ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಾಯರ ಕೃಪೆಗೆ ಪಾತ್ರರಾಗಬೇಕೆಂದು ಬಿ.ಎಸ್.ಚಂದ್ರಶೇಖರಯ್ಯ ಮೆಮೊರಿಯಲ್ ಚಾರಿಟಬಲ್ ಟ್ರಸ್ಟ್ ಕೋರಿದೆ.
ವರದಿ: ಗಿರೀಶ್ ಕೆ ಭಟ್




